ಐತಿಹಾಸಿಕವಾಗಿ ಪ್ರಸಿದ್ಧಿಯಾದ ಶಿಡ್ಲಘಟ್ಟ ತಾಲ್ಲೂಕಿನ H-Crossನಲ್ಲಿನ ಶ್ರೀ ಸೀತಾರಾಮಾಂಜನೇಯಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಕಾರ‍್ಯಕ್ರಮವು ಶನಿವಾರ ಸರಳವಾಗಿ ಭಕ್ತಿಪೂರ್ವಕವಾಗಿ ನಡೆಯಿತು. ಸುತ್ತ ಮುತ್ತಲ ನೂರಾರು ಮಂದಿ ಭಕ್ತರು ಸ್ವಾಮಿಯ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು.
ತಾಲ್ಲೂಕಿನ ಕುಂಭಿಗಾನಹಳ್ಳಿ ಗ್ರಾಮ ಪಂಚಾಯಿತಿಯ ಎಚ್.ಕ್ರಾಸ್‌ನಲ್ಲಿ ಅನಾದಿ ಕಾಲದಿಂದಲೂ ನೆಲೆಸಿರುವ ಶ್ರೀಸೀತಾರಾಮಾಂಜನೇಯಸ್ವಾಮಿ ದೇವಾಲಯದ ಐತಿಹಾಸಿಕ ಬ್ರಹ್ಮರಥೋತ್ಸವದಲ್ಲಿ ಸೀತೆ ರಾಮ ಲಕ್ಷ್ಮಣ ಹಾಗೂ ಆಂಜನೇಯಸ್ವಾಮಿ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಮಾಡಿ ಉತ್ಸವ ಮೂರ್ತಿಗಳನ್ನು ಅಲಂಕೃತ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಊರಿನ ಪ್ರಮುಖ ಬೀದಿಗಳಲ್ಲಿ ತೇರನ್ನು ಎಳೆಯಲಾಯಿತು.
ನೆರೆದಿದ್ದ ಭಕ್ತರು ದವಳ ಬಾಳೆ ಹಣ್ಣನ್ನು ತೇರಿನ ತುದಿಯಲ್ಲಿನ ಕಳಶಕ್ಕೆ ಎಸೆದು ತಮ್ಮ ಇಷ್ಟಾರ್ಥಗಳು ಈಡೇರಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.
ಪರಿಷೆಗೆಂದು ಬುರಗು ಬತಾಸು ಮಕ್ಕಳ ಆಟಿಕೆ ವಸ್ತುಗಳು ಹೆಂಗೆಳೆಯರ ಅಲಂಕಾರಿಕ ವಸ್ತುಗಳು ಸೇರಿದಂತೆ ನಾನಾ ಅಂಗಡಿಗಳು ಹೋಟೆಲ್‌ಗಳು ತಲೆ ಎತ್ತಿದ್ದವು. ಬ್ರಹ್ಮರಥೋತ್ಸವಕ್ಕೆ ಆಗಮಿಸಿದ್ದ ಎಲ್ಲ ಭಕ್ತರಿಗೂ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್, ದೇವಾಲಯದ ಪ್ರೋತ್ಸಾಹಕರಾದ ಅಯ್ಯಪ್ಪ, ಭೀಮೇಶ್, ಚನ್ನರಾಯಪ್ಪ, ಸುಬ್ರಮಣಿ, ರಾಜಣ್ಣ, ಕೆಂಚಪ್ಪ, ನಾಗರಾಜು ಹಾಜರಿದ್ದರು.