ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಜಂಗಮಕೋಟೆ ಗ್ರಾಮಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ, ಗುರುವಂದನಾ ಕಾರ್ಯಕ್ರಮದಲ್ಲಿ ಜಂಗಮಕೋಟೆ ಗ್ರಾಮಪಂಚಾಯಿತಿ ಅಧ್ಯಕ್ಷ ಜೆ.ಎಂ.ಶ್ರೀನಿವಾಸ್ ಮಾತನಾಡಿದರು.
ಭಾರತೀಯ ಇತಿಹಾಸದಲ್ಲಿ ಗುರು ಪರಂಪರೆಯು ಸನಾತನವಾದುದು. ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರ ಮತ್ತು ಶ್ರೇಷ್ಟವಾದುದು. ವಿದ್ಯಾರ್ಥಿಗಳ ಆಸಕ್ತಿಗಳನ್ನು ವೃದ್ಧಿಸುವ, ಅವರ ಬದುಕಿಗೆ ಗುರಿಯನ್ನು ರೂಪಿಸಿಕೊಡುವ ಶಿಕ್ಷಕರ ಪಾತ್ರವು ಮಹತ್ವದ್ದು. ಬದಲಾದ ಕಾಲಘಟ್ಟದಲ್ಲಿ ಶಿಕ್ಷಕರನ್ನು ಸಮಾಜವು ನೋಡುವ ದೃಷ್ಟಿಕೋನವು ಬದಲಾಗುತ್ತಿದೆ. ಶಿಷ್ಯವೃಂದಕ್ಕೆ ಶಿಕ್ಷಕರು ಉತ್ತಮ ಜೀವನ ಮತ್ತು ಬದುಕಿಗೆ ರೂಪ ಕೊಡುವ ಶಕ್ತಿಯನ್ನು ಪಡೆದಿದ್ದಾರೆ ಎಂದು ಅವರು ತಿಳಿಸಿದರು.
ಕ್ಷೇತ್ರಶಿಕ್ಷಣಾಧಿಕಾರಿ ಆಂಜನೇಯ ಮಾತನಾಡಿ, ಮಗುವಿನ ವೈಯಕ್ತಿಕ ಸಾಮರ್ಥ್ಯ ಮತ್ತು ಶಕ್ತಿಗೆ ಅನುಗುಣವಾಗಿ ತಿದ್ದುವ, ಮಾರ್ಗದರ್ಶನ ಮಾಡುವ ಕೆಲಸವನ್ನು ನಿರಪೇಕ್ಷವಾಗಿ ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜೆ.ಎನ್.ನಾಗರಾಜು ಮಾತನಾಡಿ, ವ್ಯಕ್ತಿಗೆ ಗುರುವಿನ ಮಾರ್ಗದರ್ಶನ, ನಿರ್ದಿಷ್ಟ ಗುರಿಯಿದ್ದರೆ ಏನನ್ನು ಬೇಕಾದರೂ ಸುಲಭವಾಗಿ ಸಾಧಿಸಬಹುದಾಗಿದೆ ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಉಪನ್ಯಾಸ ನೀಡಿ, ಶಿಕ್ಷಣದಲ್ಲಿ ವಿಜ್ಞಾನ, ಪ್ರಜಾಪ್ರಭುತ್ವದ ಗುಣ, ಮೌಲ್ಯಗಳ ಅರಿವು ಇದ್ದು, ಶಿಕ್ಷಕರು ಮಗುವಿನ ಮನಸ್ಸು ಮತ್ತು ಆತ್ಮಕ್ಕೆ ಸೂಕ್ತ ತರಬೇತಿ ನೀಡಿದಾಗ ಉತ್ತಮ ವ್ಯಕ್ತಿತ್ವ ನಿರ್ಮಿಸಲು ಸಾಧ್ಯ. ಶಿಕ್ಷಕನು ಸದ್ಗುಣಗಳ ಸಾಕಾರ ರೂಪವಾಗಬೇಕು. ನಿರಂತರ ಅಧ್ಯಯನಕಾರಿಯೂ ಆಗಿ ಬದಲಾಗುವ ಕಾಲಘಟ್ಟಕ್ಕೆ ಅನುಗುಣವಾಗಿ ಹೊಂದಿಕೊಂಡು ಬೋಧಿಸುವ ನಡೆ, ನುಡಿ, ಆಚಾರ, ಶಿಸ್ತು ಹೊಂದಿರಬೇಕಾಗುತ್ತದೆ ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ನಿವೃತ್ತ ಮುಖ್ಯಶಿಕ್ಷಕ ಜಿ.ಕೃಷ್ಣಮೂರ್ತಿ, ಮುಖ್ಯಶಿಕ್ಷಕ ಜೆ.ಎಂ.ಕೃಷ್ಣಪ್ಪ, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಜ್ರೇಶ್ ಮಾತನಾಡಿದರು. ಪ್ರಬಾರಿ ಮುಖ್ಯಶಿಕ್ಷಕಿ ಜೆ.ಎಂ.ಕಲ್ಪನಾ ಅವರು ಶಿಕ್ಷಕರ ಕುರಿತ ನುಡಿಗಟ್ಟುಗಳನ್ನು ವಾಚಿಸಿದರು. ಜಂಗಮಕೋಟೆ ಕ್ಲಸ್ಟರ್‌ನ ಎಲ್ಲಾ ಶಾಲೆಗಳ ಬೋಧಕವರ್ಗದವರಿಗೆ ಗುರುವಂದನೆ ನಡೆಯಿತು.
ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಸುಮಿತ್ರಮ್ಮ, ಡೆಪ್ಯೂಟಿ ತಹಸೀಲ್ದಾರ್ ನಾಗರಾಜು, ರೆವಿನ್ಯೂ ಇನ್‌ಸ್ಪೆಕ್ಟರ್ ಶಶಿಕುಮಾರ್, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ರಾಜೇಶ್ವರಿ ಉಜ್ರೇಕರ್, ಪೊಲೀಸ್ ದಫೇದಾರ್ ರಂಗನಾಥ್, ಪೊಲೀಸ್ ಪೇದೆ ಶಿವರಾಜ್, ಗ್ರಾಮಲೆಕ್ಕಿಗ ಕಾರ್ತೀಕ್, ಸಿಆರ್‌ಪಿ ರಮೇಶ್‌ಕುಮಾರ್, ನಾರಾಯಣಸ್ವಾಮಿ, ಶ್ರೀಧರ್, ನಿವೃತ್ತ ಮುಖ್ಯಶಿಕ್ಷಕರು, ಗ್ರಾಮಪಂಚಾಯಿತಿ ಸದಸ್ಯರು ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi