Mallur, Sidlaghatta : ಗುರುಪೂರ್ಣಿಮೆ (Gurupurnima) ಅಂಗವಾಗಿ ಬುಧವಾರ ತಾಲ್ಲೂಕಿನ ವಿವಿಧ ಸಾಯಿನಾಥ (Sainatha) ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ನಡೆಸಲಾಯಿತು.
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಸಮೀಪದ ಭಟ್ರೇನಹಳ್ಳಿಯ ಸಾಯಿನಾಥ ಜ್ಞಾನಮಂದಿರದಲ್ಲಿ (Bhatrenahalli Sainatha Gnana Mandira) ಸಾಯಿಬಾಬಾಗೆ ಮುಂಜಾನೆ ಕಾಕಡಾರತಿಯನ್ನು ಮಾಡಲಾಯಿತು. ಸುದರ್ಶನ ಹೋಮ, ಲಕ್ಷ್ಮೀನರಸಿಂಹಸ್ವಾಮಿ ಹೋಮ, ಸಾಯಿ ಹೋಮ, ಧನ್ವಂತರಿ ಹೋಮ ಮತ್ತು ಸತ್ಯನಾರಾಯಣ ಪೂಜೆಯನ್ನು ನಡೆಸಲಾಯಿತು.
ದೇವಾಲಯವನ್ನು ಹಾಗೂ ದೇವರುಗಳನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಪ್ರಸಾದ ವಿನಿಯೋಗ ನಡೆಸಲಾಯಿತು. ಸಂಜೆ ಘಂಟಸಾಲ ಗಾನ ಕಲಾ ವೃಂದದವರಿಂದ ಭಕ್ತಿಗೀತೆಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗುರುವಾರ ಸಂಜೆ ಬಾಬಾ ರವರ ಹೂವಿನ ಪಲ್ಲಕ್ಕಿ ಇರಲಿದ್ದು, ದೇವಾಲಯದಲ್ಲಿ ಆವರಣದಲ್ಲಿ ಭಕ್ತಿ ಗೀತೆಗಳು, ಚಲನ ಚಿತ್ರ ಗೀತೆಗಳ ಸಂಗೀತೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.