ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಶ್ರೀಕೆಂಪಣ್ಣಸ್ವಾಮಿ ಹಾಗೂ ವೀರಣ್ಣಸ್ವಾಮಿ ದೇವಾಲಯದ ಕುಲ ಬಾಂಧವರಿಂದ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ “ಗುಡಿ ಜಾತ್ರೆಯ ದೀಪಾರಾಧನಾ ಮಹೋತ್ಸವ” ಸೋಮವಾರ ವೀರಣ್ಣಕೆಂಪಣ್ಣ ದೇವಾಲಯದ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಸೇರಿ ಆಂಧ್ರ ಮತ್ತು ತಮಿಳುನಾಡಿನಲ್ಲಿ ನೆಲೆಸಿರುವ ಒಟ್ಟೋರು ಗುಂಪಿನ ಸುಮಾರು 3 ಸಾವಿರ ಕುಟುಂಬಗಳ ಸಾವಿರಾರು ಮಂದಿ ಸೇರಿದ್ದ ಗುಡಿ ಜಾತ್ರಾ ದೀಪಾರಾಧಾನಾ ಮಹೋತ್ಸವದಿಂದಾಗಿ ಕೆಲ ಕಾಲ ಶಿಡ್ಲಘಟ್ಟ ಬೆಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಗುಡಿ ಜಾತ್ರೆಯಲ್ಲಿ ಭಾಗವಹಿಸುವ ಪ್ರತಿ ಕುಟುಂಬವೂ ತಲಾ 8 ಕೆಜಿ ಅಕ್ಕಿ, 8 ಕೆಜಿ ಬೆಲ್ಲದೊಂದಿಗೆ ತಯಾರಿಸಿದ ತಂಬಿಟ್ಟು ದೀಪವನ್ನು ತಲೆ ಮೇಲೆ ಹೊತ್ತು ಕಾಲ್ನಡಿಗೆಯಲ್ಲಿ ಸಾಗಿ ದೇವರಿಗೆ ಬೆಳಗುವುದೆ ಈ ಗುಡಿ ಜಾತ್ರೆಯ ವಿಶೇಷ.
ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿ ಸೋಮವಾರ ಬೆಳಗ್ಗೆ ಆರಂಭವಾದ ಗುಡಿ ಜಾತ್ರೆಯ ದೀಪದ ಮೆರವಣಿಗೆಯಲ್ಲಿ ಸಾವಿರಾರು ಹೆಣ್ಣು ಮಕ್ಕಳು, ಮುತ್ತೈದೆಯರು ತಂಬಿಟ್ಟಿನ ದೀಪವನ್ನು ತಲೆ ಮೇಲೆ ಹೊತ್ತು ಹಂಡಿಗನಾಳದ ಕೆವಿ ಭವನದವರೆಗೂ ಕಾಲ್ನಡಿಗೆಯಲ್ಲಿ ಸಾಗಿದರು. ಇದೇ ಸಮಯದಲ್ಲಿ ವಿಜಯಪುರದ ಚಿಕ್ಕಮಾಚಪ್ಪನವರ ಹೊಸದೇವರ ಮನೆಯಿಂದ ಮೂಲ ದೀಪದ ಮೆರವಣಿಗೆ ಸಹ ಆರಂಭವಾಗಿತ್ತು.
ನಂತರ ವೀರಣ್ಣ ಕೆಂಪಣ್ಣ ದೇವಾಲಯದಲ್ಲಿ ಮನೆದೇವರುಗಳಿಗೆ ಅಭಿಷೇಕ, ದೀಪಾರಾಧನೆ, ಹೋಮ ಹವನ ಹಾಗೂ ಶ್ರೀಗಳಿಂದ ಆಶೀರ್ವಚನ, ಗಣ್ಯರಿಂದ ಹಿತವಚನ, ಸಾಮೂಹಿಕ ಅನ್ನ ಸಂತರ್ಪಣೆ, ಹಿರಿಯರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು.
“ವೀರಣ್ಣನು ತನ್ನ ಮದುವೆಯ ಚಪ್ಪರದ ದಿನವೇ ಕೇಶವಾರದ ಗೋವು ಕಳ್ಳರೊಡನೆ ನಡೆದ ಹೋರಾಟದಲ್ಲಿ ಮಡಿಯುತ್ತಾನೆ. ಮಾರನೇ ದಿನ ಆತನಿಗೆ ದೇವನಹಳ್ಳಿ ತಾಲ್ಲೂಕು ವಿಜಯಪುರದ ಹೆಣ್ಣುಮಗಳೊಂದಿಗೆ ವಿವಾಹ ನಡೆಯಬೇಕಿರುತ್ತದೆ. ಅದರ ಗುರುತಾಗಿ ಹಂಡಿಗನಾಳದಲ್ಲಿ ನಡೆದ ಗುಡಿಜಾತ್ರೆಯ ಮೊದಲ ದೀಪ ವಿಜಯಪುರದಿಂದ ಮಿಠಾಯಿ ಬುಟ್ಚಿಯ ಸಮೇತ ಬರುತ್ತದೆ. ಸಾವಿರದಿನ್ನೂರು ಒಕ್ಕಲಿಗ (ಹೊಟ್ಟೋರು ಗೋತ್ರದವರು) ಕುಟುಂಬಗಳವರು ಇಲ್ಲಿ ಬಂದು ದೀಪಾರತಿ ಮಾಡುತ್ತಾರೆ. ವಿಶೇಷವೆಂದರೆ ಒಕ್ಕಲಿಗರ ಜೊತೆಯಲ್ಲಿ ಕೆಂಬಡಿಗಾನಹಳ್ಳಿಯ ಶಿವಾಚಾರದವರೂ ಇಲ್ಲಿ ದೀಪ ಮಾಡುತ್ತಾರೆ” ಎಂದು ಡಿ.ಎನ್.ಸುದರ್ಶನ್ ರೆಡ್ಡಿ ತಿಳಿಸಿದರು.
ಶ್ರೀಆದಿಚುಂಚನಗಿರಿ ಮಠದ ಶ್ರೀನಿರ್ಮಲಾನಂದನಾಥ ಮಹಾಸ್ವಾಮಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಶ್ರೀ ಚಂದ್ರಶೇಖರನಾಥಸ್ವಾಮೀಜಿ, ತುಮಕೂರಿನ ಬ್ರಹ್ಮೇಶ್ವರಸ್ವಾಮಿ ಮಹಾಸಂಸ್ಥಾನ ಮಠದ ಶ್ರೀನಂಜಾವಧೂತಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಕೆ.ವಿ.ಟ್ರಸ್ಟ್ ನ ಅಧ್ಯಕ್ಷ ಎನ್.ನಾಗರಾಜ್, ಉಪಾಧ್ಯಕ್ಷ ಬಿಳಿಶಿವಾಲೆರವಿ, ಶಾಸಕ ವಿ.ಮುನಿಯಪ್ಪ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಶಾಸಕ ಕೃಷ್ಣಬೈರೇಗೌಡ, ವಿಶ್ರಾಂತ ನ್ಯಾಯಮೂರ್ತಿ ಸಿ.ಗೋಪಾಲಗೌಡ, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರಮೇಶ್ ಗೌಡ, ಜಿಲ್ಲಾಧಿಕಾರಿ ಆರ್.ಲತಾ, ಪೊಲೀಸ್ ಎಸ್.ಪಿ. ಮಿಥುನ್ ಕುಮಾರ್, ಎಂ.ನಾರಾಯಣಸ್ವಾಮಿ, ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಮುನಿಸ್ವಾಮಿಗೌಡ, ಅಶ್ವತ್ಥಯ್ಯ, ಆಂಜಿನಪ್ಪ ಪುಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.