Sidlaghatta : ಮನೆ ಒಡತಿಗೆ ಪ್ರತಿ ತಿಂಗಳು ಎರಡು ಸಾವಿರ ರೂ ನೀಡುವ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಚಾಲನೆ ನೀಡಲಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಬಿ.ಜಿ.ಆಂಜನೇಯುಲು ತಿಳಿಸಿದರು.
ಶಿಡ್ಲಘಟ್ಟ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಕುಟುಂಬ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ ಎರಡು ಸಾವಿರ ರೂ ನೀಡುವ “ಗೃಹಲಕ್ಷ್ಮಿ” ಯೋಜನೆಯನ್ನು ರಾಜ್ಯ ಸರ್ಕಾರ ತಂದಿದೆ. ಮೈಸೂರಿನಲ್ಲಿ ಈ ಯೋಜನೆಯನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದು, ಕ್ಷೇತ್ರದಲ್ಲಿ ಶಾಸಕರು ಚಾಲನೆ ನೀಡಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಎಲ್ಲಾ ಫಲಾನುಭವಿಗಳು, ಸಾರ್ವಜನಿಕರು ಭಾಗಿಯಾಗಲು ನಗರಸಭಾ ವ್ಯಾಪ್ತಿಯಲ್ಲಿ ಎಂಟು ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಟಿವಿ ಅಥವಾ ಎಲ್.ಇ.ಡಿ ಪರದೆ ವ್ಯವಸ್ಥೆಗೊಳಿಸಲಾಗಿದೆ ಎಂದರು.
ನಗರಸಭೆ ಸಮುದಾಯ ಭವನ, ವಾಸವಿ ಕಲ್ಯಾಣ ಮಂಟಪ, ತಾಲ್ಲೂಕು ಕಚೇರಿ ಸಭಾಂಗಣ, ಸ್ತ್ರೀಶಕ್ತಿ ಭವನ, ಡಾಲ್ಫಿನ್ ಪಬ್ಲಿಕ್ ಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ನಗರೇಶ್ವರ ಕಲ್ಯಾಣ ಮಂಟಪ, ಬಿ.ಎಸ್.ಎಂ. ಶಾದಿ ಮಹಲ್ ಗಳಲ್ಲಿ ಕಾರ್ಯಕ್ರಮ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.