Sidlaghatta : ಸ್ಥಳೀಯ ಸ್ವಯಂ ಸರಕಾರ ಗ್ರಾಮ ಪಂಚಾಯಿತಿಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದಿಂದ ಫೆ.08 ರ ಗುರುವಾರ ಬೆಂಗಳೂರು ಚಲೋ ಹಮ್ಮಿಕೊಂಡಿದ್ದು ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಬೆಳ್ಳೂಟಿ ಸಂತೋಷ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯಿತ್‌ರಾಜ್ ಅಧಿನಿಯಮದಂತೆ ಗ್ರಾಮ ಪಂಚಾಯಿತಿಗಳು ಸ್ಥಳೀಯ ಸ್ವಯಂ ಸರಕಾರಗಳಾಗಿದ್ದು ಮೇಲಿನ ಹಂತದ ಅಧಿಕಾರಿಗಳು, ಬಲಾಢ್ಯ ಜನಪ್ರತಿನಿಧಿಗಳು ಗ್ರಾ.ಪಂ.ಆಡಳಿತ, ನಿರ್ಣಯಗಳಲ್ಲಿ ಹಸ್ತಕ್ಷೇಪ ಮಾಡುವುದು ದಿನ ದಿನಕ್ಕೂ ಹೆಚ್ಚುತ್ತಿದೆ. ಇದರಿಂದ ಸಂವಿಧಾನ ಬದ್ಧ ಸಂಸ್ಥೆಗಳಾದ ಗ್ರಾಮ ಪಂಚಾಯಿತಿಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು ಮೂಕ ಪ್ರೇಕ್ಷಕರಾಗುವಂತಾಗಿದೆ. ಪಂಚಾಯತ್‌ರಾಜ್ ವ್ಯವಸ್ಥೆಯ ಮೂಲಕ ಭಾರತದ ಕಟ್ಟಕಡೆಯ ವ್ಯಕ್ತಿಯನ್ನು ಪ್ರಭುವನ್ನಾಗಿಸಬೇಕೆಂಬ ಗಾಂಧೀಜಿಯವರ ಆಶಯ ಮಣ್ಣು ಪಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಂಚಾಯತ್‌ರಾಜ್ ವ್ಯವಸ್ಥೆಯಿಂದ ಈ ದೇಶದ ಎಲ್ಲ ವರ್ಗದ ಜನರಿಗೂ, ಮಹಿಳೆಯರಿಗೂ ರಾಜಕೀಯ ಅಧಿಕಾರ ಸಿಕ್ಕಿದೆ. ಈ ದೇಶದ ಎಲ್ಲ ವರ್ಗದವರಿಗೂ ರಾಜಕೀಯದ ಅಧಿಕಾರ ಸಿಗಬೇಕೆಂಬ ಅಂಬೇಡ್ಕರ್ ಅವರ ಕನಸು ನನಸಾಗಿದೆ. ಆದರೆ ಮೇಲಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಆಡಳಿತದಲ್ಲಿ ನೇರ ಹಸ್ತಕ್ಷೇಪದಿಂದ ಮೀಸಲಾತಿ ಉದ್ದೇಶ ವಿಫಲವಾಗುತ್ತಿದೆ. ಅಧಿಕಾರವಿದ್ದರೂ ಚಲಾಯಿಸಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಹಾಗಾಗಿ ಸಂವಿಧಾನದ ಆಶಯದಂತೆ ಸ್ವಯಂ ಸರಕಾರಗಳಾದ ಗ್ರಾಮಪಂಚಾಯಿತಿಗಳು ಸ್ವತಂತ್ರಸರಕಾರಗಳಾಗಿ ಕಾರ್ಯನಿರ್ವಹಿಸುವಂತಾಗಬೇಕೆಂಬುದು ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಹಳ್ಳಿ ಸತೀಶ್ ಅವರ ನೇತೃತ್ವದಲ್ಲಿ ಫೆ.08 ರಂದು ಫ್ರೀಡಂ ಫಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು, ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.