ಶಿಡ್ಲಘಟ್ಟ ನಗರದ ಆಗ್ನೇಯ ದಿಕ್ಕಿನಲ್ಲಿರುವ “ಗೌಡನ ಕೆರೆ”ಗೆ 480 ವರ್ಷಗಳ ಇತಿಹಾಸವಿದೆ. ಶಿಡ್ಲಘಟ್ಟ ನಗರದ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ ಈ ಕೆರೆಯನ್ನು ಕಟ್ಟಿಸಿದ್ದರಿಂದಾಗಿ ಇದಕ್ಕೆ “ಗೌಡನ ಕೆರೆ” ಎಂಬ ಹೆಸರು ಬಂತೆಂದು ದಾಖಲಾಗಿದೆ.
“ಗೌಡನ ಕೆರೆ” ಸರಿಸುಮಾರು 99 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, ಸುತ್ತಮುತ್ತ ನೂರಾರು ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಅವಕಾಶವಿದೆ. ಈ ಕೆರೆಯಲ್ಲಿ ನೀರು ಸಂಗ್ರಹಗೊಂಡರೆ ನಗರಕ್ಕೆ ನೀರು ಸರಬರಾಜು ಮಾಡುವ ಹಲವಾರು ಕೊಳವೆ ಬಾವಿಗಳು ಹಾಗೂ ಸುತ್ತಲಿನ ಗ್ರಾಮಗಳ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಆದರೆ, ದಶಕಗಳಿಂದಲೂ ಮಳೆಯ ಕೊರತೆಯಿಂದ ಕೆರೆಗೆ ನೀರು ಬಾರದೆ ಯಥೇಚ್ಛವಾಗಿ ಜಾಲಿಗಿಡಗಳು ಬೆಳೆದಿವೆ. ಕಾಲಕಾಲಕ್ಕೆ ಇವುಗಳನ್ನು ತೆರವು ಮಾಡದ ಪರಿಣಾಮ ಇಡೀ ಕೆರೆಯನ್ನೇ ಜಾಲಿ ಗಿಡಗಳು ಆಕ್ರಮಿಸಿವೆ.
ಅರಣ್ಯ ಇಲಾಖೆಗೆ ಸೇರಿದ ಕೆರೆ
ಎಚ್.ಎನ್. ವ್ಯಾಲಿ ನೀರು ಹರಿದು ಬರುವ ನಮ್ಮ ತಾಲ್ಲೂಕಿನ ಅಮ್ಮನ ಕೆರೆ ಮತ್ತು ಭದ್ರನ ಕೆರೆಯಲ್ಲಿ ಜಾಲಿ ಮರಗಳನ್ನು ತೆರವು ಮಾಡಲು ಮುಂದಾದಾಗ ಅರಣ್ಯ ಇಲಾಖೆಯವರು ತಡೆಯೊಡ್ಡಿ, ಕೇಸ್ ದಾಖಲಿಸಿದ್ದಾರೆ. ಗೌಡನ ಕೆರೆಯು ಡೀಮ್ಡ್ ಅರಣ್ಯಕ್ಕೆ ಸೇರಿರುವುದರಿಂದ ಜಾಲಿ ಮರಗಳನ್ನು ತೆರವು ಮಾಡಲು ಆಗುತ್ತಿಲ್ಲ.
-ಭಕ್ತರಹಳ್ಳಿ ಬೈರೇಗೌಡ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ
ಪ್ರತಿ ವರ್ಷ ಬೀಳುವ ಅಲ್ಪಸ್ವಲ್ಪ ಮಳೆಗೆ ಕೆರೆಯ ಕೆಲ ಗುಂಡಿಗಳಿಗೆ ನೀರು ತುಂಬುತ್ತವಾದರೂ ಕೆರೆಯಲ್ಲಿ ಜಾಲಿ ಮರಗಳು ಪೊದೆಗಳಂತೆ ಇರುವುದರಿಂದ ಜಾನುವಾರುಗಳು ಕೆರೆಗೆ ಹೋಗಿ ನೀರು ಕುಡಿಯಲಾಗದ ಸ್ಥಿತಿ ಏರ್ಪಟ್ಟಿದೆ. ಅಪ್ಪಿತಪ್ಪಿ ಜಾನುವಾರುಗಳು ಕೆರೆಗೆ ಇಳಿದರೆ ಕೆರೆಯಿಂದ ವಾಪಸ್ಸು ಬರುತ್ತವೆ ಎನ್ನುವ ನಂಬಿಕೆ ಇಲ್ಲದಾಗಿದೆ.
ಒಂದೆಡೆ ಇತಿಹಾಸ ಪ್ರಸಿದ್ಧ “ಗೌಡನ ಕೆರೆ” ಈಗ ಜಾಲಿಗಿಡಗಳ ಕಾರುಬಾರಾಗಿದ್ದು ಕೆರೆ ಒಳಗೆ ಮನುಷ್ಯರಿರಲಿ ಜಾನುವಾರುಗಳೂ ಸಹ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಒತ್ತುವರಿಗೆ ಈಡಾಗಿ ತನ್ನ ವಿಸ್ತೀರ್ಣವನ್ನು ಕಳೆದುಕೊಳ್ಳುತ್ತಿದೆ. ಕೆರೆ ಈಗ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಪರಿಣಾಮ ಕೆರೆಯ ತುಂಬ ಹೆಮ್ಮರವಾಗಿ ಜಾಲಿ ಗಿಡಗಳು ಬೆಳೆದು ಕೆರೆಯ ಅಸ್ಥಿತ್ವವನ್ನೇ ಅಣಕ ಮಾಡುತ್ತಿದೆ. ಇದೇನು ಕೆರೆಯೋ ಅಥವಾ ಜಾಲಿ ಗಿಡಗಳ ವನವೋ ಎಂಬ ಅನುಮಾನ ಕಾಡುವಂತಿದೆ.
ಸಣ್ಣ ನೀರಾವರಿ ಇಲಾಖೆಯಿಂದ ಅದು ಹೇಗೋ ತಪ್ಪಿ ಹೋಗಿ ಡೀಮ್ಡ್ ಅರಣ್ಯಕ್ಕೆ ಸೇರಿಕೊಂಡಿದೆ. ಆದರೆ ಅರಣ್ಯ ಇಲಾಖೆಯವರು ಒತ್ತುವರಿ ತೆರವಿಗೂ ಮುಂದಾಗದೆ, ಜಾಲಿ ಮರಗಳನ್ನೂ ತೆಗೆಯದೆ ಕೆರೆ ನುರುಪಯುಕ್ತವಾಗಿದೆ.
ಒತ್ತುವರಿಯ ತೆರವು ಮಾಡುತ್ತಿಲ್ಲ
ಶಿಡ್ಲಘಟ್ಟ ತಾಲ್ಲೂಕಿನ ಭದ್ರನ ಕೆರೆಯನ್ನು ನಾಲ್ಕು ವರ್ಷದ ಹಿಂದೆಯೇ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಒತ್ತುವರಿಯನ್ನು ತೆರವು ಮಾಡಿದ್ದರು. ಆದರೆ ನಗರಕ್ಕೆ ಅಂಟಿಕೊಂಡಂತಿರುವ ಗೌಡನ ಕೆರೆಯ ಒತ್ತುವರಿ ಮಾತ್ರ ತೆರವುಗೊಳಿಸಿಲ್ಲ. ಗೌಡನ ಕೆರೆಯನ್ನು ಹಲವಾರು ಮಂದಿ ಪ್ರಮುಖರೇ ಒತ್ತುವರಿ ಮಾಡಿಕೊಂಡಿದ್ದಾರೆ. ನಗರದ ಅಂಚಿನಲ್ಲಿರುವುದರಿಂದ ಇಲ್ಲಿ ಭೂಮಿಯ ಬೆಲೆ ಹೆಚ್ಚಿದೆ. ಕಳೆದ ನಾಲ್ಕು ತಹಶೀಲ್ದಾರ್ ಗಳಿಗೆ ರೈತ ಸಂಘದಿಂದ ಮನವಿ ಸಲ್ಲಿಸಿದ್ದರೂ ಒತ್ತುವರಿ ತೆರವು ಮಾಡುತ್ತಿಲ್ಲ.
-ರವಿಪ್ರಕಾಶ್, ರೈತ ಸಂಘ (ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅಧ್ಯಕ್ಷ
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi