ಶಿಡ್ಲಘಟ್ಟ ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿಶಿಷ್ಟ ರೀತಿಯ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಜಾನಪದ ಶೈಲಿಯಲ್ಲಿ ಸಗಣಿಯಿಂದ ಸಾರಿಸಿ ರಂಗೋಲಿ ಇಟ್ಟು ಚಿತ್ತಾರ ಬಿಡಿಸಿದ ಮಡಕೆಗೆ ಕಬ್ಬು ಹೂಗಳಿಂದ ಅಲಂಕರಿಸಲಾಗಿತ್ತು. ಎಳ್ಳು ಬೆಲ್ಲ ಇಟ್ಟು ಗೋಮಾತೆಯನ್ನು ಕರೆತಂದು ಪೂಜೆ ಸಲ್ಲಿಸಿ, ಎಳ್ಳು ಬೆಲ್ಲ ತರಕಾರಿಗಳನ್ನು ಅರ್ಪಿಸಿ ಮಕ್ಕಳು ಆರತಿ ಬೆಳಗಿದರು.
ಹಬ್ಬದ ಪ್ರಯುಕ್ತ ಎಲ್ಲಾ ಮಕ್ಕಳೂ ಸಿಹಿ ಮತ್ತು ಖಾರದ ಪೊಂಗಲ್ ತಿಂದು ಆನಂದಿಸಿದರು. ಹೆಣ್ಣು ಮಕ್ಕಳಿಗೆ ರಂಗೋಲಿ, ಗಂಡು ಮಕ್ಕಳಿಗೆ ಸಂಕ್ರಾಂತಿ ಚಿತ್ರಕಲೆಯ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು.
ಮುಖ್ಯ ಶಿಕ್ಷಕ ಎಂ.ದೇವರಾಜ,ಶಾಲೆಯ ಶಿಕ್ಷಕಿಯರಾದ ಎಚ್.ಬಿ.ಕೃಪ, ಎಸ್.ಎ.ನಳಿನಾಕ್ಷಿ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ರೂಪಿಸಿ, ಮಕ್ಕಳಿಗೆ ಸಂಕ್ರಾಂತಿ ಹಬ್ಬದ ಮಹತ್ವವನ್ನು ವಿವರಿಸಿದರು. ಎಳ್ಳು ಬೆಲ್ಲ ವನ್ನು ಮಕ್ಕಳಿಗೆ ವಿ.ಎಂ.ಮಂಜುನಾಥ್ ವಿತರಿಸಿದರು . ವಿ.ಎನ್.ಗಜೇಂದ್ರ, ಅಂಗನವಾಡಿಯ ಬಿ.ಮಂಜುಳ, ಬೈರಕ್ಕ, ಅಡುಗೆಯ ಕೆ.ಯಶೋದ, ಲಕ್ಷ್ಮಮ್ಮ ಹಾಜರಿದ್ದರು.