ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಮಲೇರಿಯಾ ವಿರೋಧಿ ಮಾಸಾಚರಣೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ತಹಶೀಲ್ದಾರ್ ರಾಜೀವ್ ಮಾತನಾಡಿದರು.
ಮಳೆ ಬೀಳುತ್ತಿರುವುದರಿಂದ ಸೊಳ್ಳೆಗಳು ಹೆಚ್ಚುತ್ತಿವೆ. ಅವುಗಳನ್ನು ನಿಯಂತ್ರಿಸುವ ಮೂಲಕ ಮಲೇರಿಯಾ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತದೆ. ಸ್ವಚ್ಛತೆ ಕಾಪಾಡಿಕೊಳ್ಳುವುದರ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಮತ್ತು ಸೊಳ್ಳೆ ಪರದೆ ಬಳಸಬೇಕು ಎಂದು ಅವರು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಚಳಿ ಜ್ವರ, ಮೈಕೈನೋವು ಕಾಣಿಸಿಕೊಂಡಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದರ ಮೂಲಕ ಸೂಕ್ತ ಚಿಕಿತ್ಸೆ ಪಡೆದಲ್ಲಿ ಶೀಘ್ರ ಗುಣಮುಖರಾಗಲು ಸಾಧ್ಯ ಎಂದರು.
ತಾಲ್ಲೂಕು ಆರೋಗ್ಯ ನಿರೀಕ್ಷಕ ದೇವರಾಜ್, ಸಿಬ್ಬಂದಿ ಮುನಿರತ್ನಮ್ಮ ಹಾಜರಿದ್ದರು.