Sidlaghatta : ಸರ್ಕಾರಿ ನೌಕರರ ನೆಮ್ಮದಿಯ ಬದುಕಿಗಾಗಿ ವಿವಿಧ ಬೇಡಿಕೆಗಳು ಈಡೇರಬೇಕು. ನೌಕರರ ಹಕ್ಕುಗಳು ರಕ್ಷಣೆಯಾಗಬೇಕು ಎಂದು ಹಮ್ಮಿಕೊಂಡಿರುವ ಮಹಾಸಮ್ಮೇಳನದಲ್ಲಿ ಶಿಡ್ಲಘಟ್ಟ ತಾಲ್ಲೂಕಿನಿಂದ ಅಪಾರಸಂಖ್ಯೆಯಲ್ಲಿ ನೌಕರರು ಭಾಗವಹಿಸಲು ಈಗಾಗಲೇ ಸಕಲಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಇದೇ ಫೇ 27 ರ ಮಂಗಳವಾರ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿರುವ ಮಹಾಸಮ್ಮೇಳನದ ಅಂಗವಾಗಿ ನಗರದ ನೌಕರರ ಭವನದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
7 ನೇ ವೇತನ ಆಯೋಗದ ವರದಿಯನ್ನು ಶೀಘ್ರ ಪಡೆದು ಅನುಷ್ಟಾನಗೊಳಿಸಬೇಕು. ಹಳೇಪಿಂಚಣಿಯ ವ್ಯವಸ್ಥೆಯನ್ನು ಮರುಜಾರಿಗೊಳಿಸಬೇಕು. ಆರೋಗ್ಯ ಸಂಜೀವಿನಿ ಕ್ಯಾಶ್‌ಲೆಸ್ ಉಚಿತ ಚಿಕಿತ್ಸಾ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಸರ್ಕಾರವು ದಿಟ್ಟ ಆದೇಶಗಳನ್ನು ಹೊರಡಿಸಬೇಕಿದೆ ಎಂದರು.
ರಾಜ್ಯದ ಎಲ್ಲಾ 100 ಕ್ಕೂ ಹೆಚ್ಚು ವೃಂದಸಂಘಗಳೂ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಕರೆನೀಡಿದ್ದು, ಫೆ ೨೭ ರಂದು ಬೆಳಗ್ಗೆ ಬೆಳಿಗ್ಗೆ ೭ ಗಂಟೆಗೆ ನಗರದ ಬಿಇಒ ಕಚೇರಿ ಮುಂಭಾಗದಿಂದ ನೌಕರರಿಗಾಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ನಿವೃತ್ತ ನೌಕರರೂ ಸೇರಿದಂತೆ ಅಧಿಕಸಂಖ್ಯೆಯಲ್ಲಿ ತೆರಳಲು ಬಸ್ ಮತ್ತು ತಿಂಡಿ ವ್ಯವಸ್ಥೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದರು.
ಮಹಾಸಮ್ಮೇಳನದ ಆಹ್ವಾನಪತ್ರಿಕೆ, ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಸಿ.ಎಂ.ಮುನಿರಾಜು, ನಿವೃತ್ತ ನೌಕರರ ಸಂಘದ ಎನ್.ಕೆ.ಗುರುರಾಜರಾವ್, ಜಯರಾಂ, ನೌಕರರ ಸಂಘದ ದೇವರಾಜು, ಅಕ್ಕಲರೆಡ್ಡಿ, ನರಸಿಂಹಪ್ಪ, ಕೆಂಪೇಗೌಡ, ಶಿಕ್ಷಣ ಸಂಯೋಜಕ ಭಾಸ್ಕರಗೌಡ, ತಾಲ್ಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ್, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಮತ್ತಿತರರು ಮಾತನಾಡಿದರು.