ಶಿಡ್ಲಘಟ್ಟ ತಾಲ್ಲೂಕಿನ ಪಿಲ್ಲಗುಂಡ್ಲಹಳ್ಳಿ ವ್ಯಾಪ್ತಿಯಲ್ಲಿ ಕೇಂದ್ರ ವಿಪತ್ತು ಅಧ್ಯಯನ ತಂಡ ತಂಡದವರು ತೋಟಗಾರಿಕೆ ಮತ್ತು ಕೃಷಿ ಬೆಳೆ ಹಾನಿಯನ್ನು ಪರಿಶೀಲನೆ ಮಾಡಿದರು.
ಸ್ಥಳೀಯ ರೈತರಾದ ತಿಮ್ಮರಾಜು ಮತ್ತು ನರಸಿಂಹ ರೆಡ್ಡಿ ಅವರು ಸೌತೆಕಾಯಿ ಮತ್ತು ಗೆಡ್ಡೆ ಕೋಸು ಬೆಳೆ ಹಾನಿಯಾದ ನೋವನ್ನು ತಂಡದ ಮುಂದೆ ತೋಡಿಕೊಂಡರು. ಈ ಕುರಿತು ಅಧಿಕಾರಿಗಳು ಪೂರಕ ಮಾಹಿತಿ ಒದಗಿಸಿದರು.
ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿಯೂ ಅಶೋಕ ಎಂಬುವವರ ರಾಗಿ ಹೊಲದಲ್ಲಿ ಕೇಂದ್ರ ವಿಪತ್ತು ಅಧ್ಯಯನ ತಂಡದವರು ಭೇಟಿ ನೀಡಿ ಆ ಭಾಗದ ರೈತರ ಹಾನಿಗೊಳಗಾದ ಬೆಳೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಫಲವತ್ತಾದ ಮಣ್ಣು ಕೊಚ್ಚಿ ಹೋಗಿರುವವರಿಗೂ ಪರಿಹಾರ ನೀಡಲು ಮನವಿ :
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಮತ್ತು ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆರೆಕಟ್ಟೆಗಳು ಒಡೆದು ಹೋಗಿ ರೈತರು ಬೆಳೆದಿದ್ದ ಬೆಳೆ ಮಣ್ಣುಪಾಲು ಆಗಿದೆ. ಬೆಳೆಯಷ್ಟೇ ಅಲ್ಲದೆ ಫಲವತ್ತಾದ ಮಣ್ಣು ಕೂಡ ಕೊಚ್ಚಿ ಹೋಗಿದೆ. ರೈತರಿಗೆ ಸೂಕ್ತ ನಷ್ಟ ಪರಿಹಾರವನ್ನು ಒದಗಿಸಬೇಕೆಂದು ರಾಜ್ಯ ಯುವ ಶಕ್ತಿ ಸಂಘಟನೆಯ ಉಪಾಧ್ಯಕ್ಷ ಹಾಗೂ ನಲ್ಲೋಜನಹಳ್ಳಿಯ ವಿಜಯಬಾವರೆಡ್ಡಿ ಈ ಸಂದರ್ಭದಲ್ಲಿ ಕೇಂದ್ರ ವಿಪತ್ತು ಅಧ್ಯಯನ ತಂಡದವರಿಗೆ ಮನವಿ ಸಲ್ಲಿಸಿದರು.
ಕೆರೆ ಕಟ್ಟೆ ಒಡೆದಿರುವುದರಿಂದ ಇನ್ನು ಎರಡು ವರ್ಷ ರೈತರು ಬೆಳೆ ಬೆಳೆಯುವಂತಿಲ್ಲ, ಈಗ ಬೆಳೆದಿದ್ದ ಬೆಳೆಗಳು ಕೂಡ ನಷ್ಟವಗಿದೆ. ಮಣ್ಣು ಕೊಚ್ಚಿ ಹೋಗಿರುವುದರಿಂದ ಭೂಮಿಯನ್ನು ಫಲವತ್ತತೆಗೊಳಿಸಲು ರೈತರು ಸಾಕಷ್ಟು ಹಣ, ಶ್ರಮ ಖರ್ಚು ಮಾಡಬೇಕಾಗಿದೆ. ನಲ್ಲೋಜನಹಳ್ಳಿ, ಆನೆಮಡಗು, ಪಿಲ್ಲಗುಂಡ್ಲಹಳ್ಳಿ, ನಾಚಗಾನಹಳ್ಳಿ, ಯರ್ರಹಳ್ಳಿ, ಕುದುಪುಕುಂಟೆ, ತಿಮ್ಮನಾಯಕನಹಳ್ಳಿ, ಗುರ್ಲಗುಮ್ಮನಹಳ್ಳಿ, ದಡಂಘಟ್ಟ, ರಾಯಪ್ಪನಹಳ್ಳಿ ಅಚ್ಚುಕಟ್ಟುಗಳ ಹಳ್ಳಿಗಳ ಅನೇಕ ರೈತರ ಬೆಳೆ ಹಾಗೂ ಆಸ್ತಿ ನಷ್ಟ ಉಂಟಾಗಿದೆ. ಫಲವತ್ತಾದ ಭೂಮಿಯನ್ನು ಕಳೆದುಕೊಂಡಿರುವ ರೈತರಿಗೆ ಮಣ್ಣು ಸವಕಳಿ ನಷ್ಟ ಪರಿಹಾರವನ್ನು ನೀಡಲು ಅವರು ಮನವಿ ಮಾಡಿದರು.
ಅನುದಾನಕ್ಕೆ ನಗರಸಭೆ ಅಧ್ಯಕ್ಷೆಯ ಮನವಿ :
ನಗರದ ವ್ಯಾಪ್ತಿಯಲ್ಲಿ ಈಚೆಗೆ ಬಿದ್ದ ಮಳೆಗೆ ಹಲವು ಮನೆಗಳು ಬಿದ್ದು ಹೋಗಿ ನೂರಾರು ಮನೆಗಳು ಹಾಳಾಗಿವೆ. ನಗರ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ಕೊಳಚೆ ಪ್ರದೇಶಗಳಿದ್ದು, ಅಲ್ಲಿನ ಎಲ್ಲಾ ರಸ್ತೆಗಳು, ಚರಂಡಿಗಳು ಹಾಳಾಗಿ ಸುಮಾರು ಹತ್ತು ಕೋಟಿ ರೂಗಳಷ್ಟು ನಷ್ಟವಾಗಿದೆ. ನಗರಸಭೆಯಾಗಿ ಮೇಲ್ದರ್ಜೆಗೇರಿ ಹತ್ತು ವರ್ಷಗಳಾದರೂ ಈವರೆಗೂ ಯಾವುದೇ ವಿಶೇಷ ಅನುದಾನ ಬಿಡುಗಡೆಯಾಗಿಲ್ಲ. ಕೂಡಲೇ ಪರಿಶಿಲನೆ ಮಾಡಿ 20 ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕೆಂದು ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್ ಮನವಿ ಮಾಡಿದರು.
ಕೇಂದ್ರ ವಿಪತ್ತು ಅಧ್ಯಯನ ತಂಡದ ಮುಖ್ಯಸ್ಥ ಭಾರತ ಸರ್ಕಾರದ ಲೆಕ್ಕಪತ್ರ ವಿಭಾಗದ ಮುಖ್ಯ ನಿಯಂತ್ರಕ ಸುಶಿಲ್ ಪಾಲ್ ಮತ್ತು ಕೇಂದ್ರ ವಿಪತ್ತು ಅಧ್ಯಯನ ತಂಡದ ಸದಸ್ಯ, ಭಾರತ ಸರ್ಕಾರದ ಕೃಷಿ ಇಲಾಖೆ ನಿರ್ದೇಶಕ ಸುಭಾಷ್ ಚಂದ್ರ, ಜಿಲ್ಲಾಧಿಕಾರಿ ಆರ್.ಲತಾ, ಕೆ.ಎಸ್.ಡಿ.ಎಂ.ಎ ಆಯುಕ್ತ ಡಾ. ಮನೋಜ್ ರಾಜನ್, ತಹಶಿಲ್ದಾರ್ ರಾಜೀವ್ ಹಾಜರಿದ್ದರು.