Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಪ್ರೌಡಶಾಲೆ ಆವರಣದಲ್ಲಿ ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಗಳ ಆಶ್ರಯದಲ್ಲಿ ಸರ್ಕಾರಿ ಶಾಲೆಗಳ (Government school) 8 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಕರ್ನಾಟಕ ದರ್ಶನ ಪ್ರವಾಸ (Karnataka Darshana Tour) ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾ ಅಧ್ಯಕ್ಷೆ ಸುಮಿತ್ರಾ ರಮೇಶ್ ಅವರು ಔಪಚಾರಿಕವಾಗಿ ತರಗತಿಯಲ್ಲಿ ಮಾಡುವ ಬೋಧನೆ ಮೂಲಕ ಕಲಿಯುವ ಶಿಕ್ಷಣದೊಡನೆ ಅನೌಪಚಾರಿಕವಾಗಿ ಕಣ್ಣಾರೆ ನೋಡುವ ಮೂಲಕ ಕಲಿಯುವುದು ಸಾಕಷ್ಟಿದೆ. ವಿದ್ಯಾರ್ಥಿದಿಸೆಯಲ್ಲಿ ಮಾಡುವ ಶೈಕ್ಷಣಿಕ ಪ್ರವಾಸಗಳು ಕಲಿಕೆಗೆ ಪೂರಕವಾದ ಅರಿವನ್ನು ಪಡೆಯುವ ಯಾತ್ರೆಗಳಾಗಿವೆ ಎಂದು ತಿಳಿಸಿದರು.
ಬೋಧನಾ ವಿಷಯಗಳಿಗೆ ಪೂರಕವಾದ ಐತಿಹಾಸಿಕ, ಭೌಗೋಳಿಕ, ಪೌರಾಣಿಕ ಸ್ಥಳವಿಷಯ, ಮಹತ್ವಗಳನ್ನು ಖುದ್ದು ಭೇಟಿನೀಡಿ ತಿಳಿದುಕೊಳ್ಳಲು ಪ್ರವಾಸ ಅನುಕೂಲವಾಗಿದೆ. ಪ್ರವಾಸಗಳಿಂದ ನೋಡಿ ತಿಳಿದ ವಿಷಯವು ಶಾಶ್ವತ ಕಲಿಕೆಯಾಗಲಿದೆ ಎಂದು ಅವರು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ ಮಾತನಾಡಿ, ನಾಡಿನ ಸಾಂಸ್ಕೃತಿಕ ಗರಿಮೆ, ಮಣ್ಣಿನ ವಿಶೇಷ, ಹವಾಗುಣ, ವೈವಿಧ್ಯತೆಯನ್ನು ಮಕ್ಕಳದಿಸೆಯಲ್ಲಿಅರಿಯಲು ಪ್ರವಾಸದಂತಹ ಕಾರ್ಯಕ್ರಮಗಳನ್ನು ಇಲಾಖೆಯು ಆಯೋಜಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ಕೊರೋನಾ ಮಹಾಮಾರಿಯಿಂದಾಗಿ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲು ಸಾಧ್ಯವಿರಲಿಲ್ಲ. ಈ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳು ಮಾಮೂಲಿನ ಸ್ಥಿತಿಗೆ ಬಂದಿದ್ದು, ಪ್ರವಾಸಗಳು ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳಲು ಸಹಕಾರಿಯಾಗಲಿವೆ ಎಂದರು.
ಶಿಕ್ಷಣ ಸಂಯೋಜಕ ಇ.ಭಾಸ್ಕರಗೌಡ ಮಾತನಾಡಿ, ತಾಲೂಕಿನಿಂದ ವಿವಿಧ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ವಸತಿಶಾಲೆಗಳಲ್ಲಿ 8 ನೇ ತರಗತಿಗಳಲ್ಲಿ ಕಲಿಯುತ್ತಿರುವ ಸುಮಾರು 127 ಮಂದಿ ವಿದ್ಯಾರ್ಥಿಗಳು ಮೂರು ಬಸ್‌ಗಳಲ್ಲಿ ಪ್ರವಾಸದಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ನಾಲ್ಕುದಿನಗಳ ಕಾಲ ಚಿತ್ರದುರ್ಗ, ಹಂಪಿ, ಹೊಸಪೇಟೆ, ಕೂಡಲಸಂಗಮ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಶಿವಮೊಗ್ಗ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು, ಶ್ರವಣಬೆಳಗೊಳ ಮತ್ತಿತರ ಸ್ಥಳಗಳಿಗೆ ಭೇಟಿನೀಡಿ ಬರಲಿದ್ದಾರೆ. ಪ್ರವಾಸದಲ್ಲಿ ೬ ಮಂದಿ ಮಾರ್ಗದರ್ಶಿ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ತಾಲ್ಲೂಕು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಕಾರ್ಯದರ್ಶಿ ನರಸಿಂಹರಾಜು, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಂಯೋಜಕ ವೆಂಕಟೇಶ್, ರಾಜೇಶ್, ವಿವಿಧ ಶಾಲೆಗಳ ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು.