ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಗುರುವಾರ ವಿಶ್ವ ಶ್ರವಣ ದಿನದ ಕಾರ್ಯಕ್ರಮದ ಅಂಗವಾಗಿ ನಡೆದ ಜಾಥಾಗೆ ಚಾಲನೆ ನೀಡಿ ತಾಲ್ಲೂಕು ಆರೋಗ್ಯಧಿಕಾರಿ ಡಾ.ವೆಂಕಟೇಶ ಮೂರ್ತಿ ಮಾತನಾಡಿದರು.
“ನಿಮ್ಮ ಸಾಮರ್ಥ್ಯಕ್ಕೆ ಶ್ರವಣ ದೋಷ ಅಡ್ಡಿಯಾಗದಿರಲಿ” ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷ ವಿಶ್ವ ಶ್ರವಣ ದಿನ ಆಚರಿಸುತ್ತಿದ್ದೇವೆ. ಕಿವುಡುತನ ಬರುವುದನ್ನು ಹೇಗೆ ತಡೆಗಟ್ಟಬಹುದು ಎಂಬುದರ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಕಿವಿಯ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಹೆಚ್ಚುತ್ತಿರುವ ಶಬ್ಧಮಾಲಿನ್ಯ ವಾಹನಗಳ ಸಾಂದ್ರತೆ ಮತ್ತು ಕೈಗಾರೀಕರಣದಿಂದಾಗಿ ಜನರ ಶ್ರವಣ ಶಕ್ತಿಯ ಮೇಲೆ ಋಣಾತ್ಮಕ ಪರಿಣಾಮ ನಿರಂತರವಾಗಿ ಉಂಟಾಗುತ್ತಿದೆ. ಸುಮಾರು 205 ಮಿಲಿಯನ್ ಮಂದಿ ವಿಶ್ವದಾದ್ಯಂತ ಕಿವಿ ಸಂಬಂಧಿ ರೋಗದಿಂದ ಬಳಲುತ್ತಿದ್ದಾರೆ. ವಿಶ್ವಸಂಸ್ಥೆ ವರದಿ ಪ್ರಕಾರ ಇದೇ ಪರಿಸ್ಥಿತಿ ಮುಂದುವರಿದರೆ 2050ರ ಹೊತ್ತಿಗೆ ಪ್ರತೀ ನಾಲ್ಕರಲ್ಲಿ ಒಬ್ಬರು ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಹೆಚ್ಚಿನ ಎಲ್ಲಾ ಕಿವಿ ಸಮಸ್ಯೆಗಳನ್ನು ಆರಂಭದಲ್ಲಿ ಗುರುತಿಸಿ ತಡೆಗಟ್ಟಬಹುದಾಗಿದೆ ಎಂದರು.
ಮಕ್ಕಳಲ್ಲಿ ಶೇಕಡಾ 60 ರಷ್ಟು ಕಿವಿ ಸಂಬಂಧಿ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವಿದೆ. ಆರಂಭಿಕ ಹಂತದಲ್ಲಿ ಶ್ರವಣ ಸಮಸ್ಯೆ ಗುರುತಿಸಿ ಸಕಾಲದಲ್ಲಿ ಚಿಕಿತ್ಸೆ ನೀಡಿದರೆ ಶಾಶ್ವತವಾದ ಕಿವುಡುತನವನ್ನು ತಡೆಗಟ್ಟಲು ಸಾಧ್ಯವಿದೆ. ಹುಟ್ಟುತ್ತಲೇ ಕಾಡುವ ಶ್ರವಣ ದೋಷ ಹಾಗೂ ವಯೋಸಹಜ ಶ್ರವಣ ಸಮಸ್ಯೆಗಳನ್ನು ಪತ್ತೆ ಹಚ್ಚುವ ಹಾಗೂ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಆವಿಷ್ಕಾರಗಳು ನಡೆಯುತ್ತಿದ್ದು, ಇಂದು ಹಲವಾರು ತಂತ್ರಜ್ಞಾನ ಆಧಾರಿತ ಸೌಲಭ್ಯಗಳು ಲಭ್ಯವಿದೆ ಎಂದು ಹೇಳಿದರು.
ತಡೆಗಟ್ಟಬಹುದಾದ ಕಿವಿಡುತನವನ್ನು ಜಾಗೃತಿ ಕಾರ್ಯಕ್ರಮ ಮತ್ತು ಅರಿವು ಮೂಡಿಸುವ ಮುಖಾಂತರ ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ. ಇನ್ನು ತಡೆಗಟ್ಟಲಾರದ ಕಿವುಡುತನವನ್ನು ತಡೆಯಲು ಸಾಧ್ಯವಿಲ್ಲದಿದ್ದರೆ ಅಂತಹ ರೋಗಿಗಳಿಗೆ ಸೂಕ್ತವಾಗಿ ಚಿಕಿತ್ಸೆ ಅಥವಾ ಸಲಕರಣೆಗಳ ಮುಖಾಂತರ ಕಿವುಡುತನದ ತೀವ್ರತೆಯನ್ನು ಕಡಿತಗೊಳಿಸಿ ಅವರಿಗೆ ಮಾನಸಿಕ ಧೈರ್ಯ ತುಂಬಿ ಅವರನ್ನು ಮುಖ್ಯವಾಹಿನಿಗೆ ಕರೆತರುವ ಕೆಲಸ ಮಾಡಬೇಕು ಎಂದು ಹೇಳಿದರು.
ವಿಶ್ವ ಶ್ರವಣ ದಿನದ ಪ್ರಯುಕ್ತ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಡಾ.ನಾಗರಾಜ್, ಡಾ.ಸುಗುಣ, ಡಾ.ಪವಿತ್ರ ಆಸ್ಪತ್ರೆಯ ಸಿಬ್ಬಂದಿ ಮುನಿರತ್ನಮ್ಮ, ಲೋಕೇಶ್, ಗೀತಾ, ನಂದಿನಿ ಹಾಜರಿದ್ದರು.