Sidlaghatta : ನಾಗರಿಕ ಸಮಾಜದಲ್ಲಿ ಗಂಡು ಮಕ್ಕಳು, ಹೆಣ್ಣು ಮಕ್ಕಳು ಎಂಬ ಲಿಂಗ ತಾರತಮ್ಯ ಇರಬಾರದು, ಪುರುಷ ಪ್ರಧಾನ ಸಮಾಜದಿಂದ ಮಾತ್ರ ದೇಶ ಅಭಿವೃದ್ದಿಯಾಗಲಾರದು, ದೇಶದ ಅಭಿವೃದ್ದಿಯಲ್ಲಿ ಹೆಣ್ಣು ಮಕ್ಕಳ ಪಾತ್ರ ಬಹಳಷ್ಟಿದೆ ಎನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿವೆ ಎಂದು ಎಸ್.ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಹೇಳಿದರು.
ನಗರದ ಸರ್ಕಾರಿ ಪ್ರೌಡಶಾಲೆಯ ಆವರಣದಲ್ಲಿ ರೀಚಿಂಗ್ ಹ್ಯಾಂಡ್ ಹಾಗು ಮೆಕ್ಕಾಫೆ ಸಂಸ್ಥೆಯ ಸಹಯೋಗದಲ್ಲಿ ನಿರ್ಮಿಸಲಾಗಿರುವ ಹೆಣ್ಣು ಮಕ್ಕಳ ಶೌಚಾಲಯ ಕಟ್ಟಡದ ಉದ್ಘಾಟನೆಯನ್ನು ಬುಧವಾರ ನೆರವೇರಿಸಿ ಅವರು ಮಾತನಾಡಿದರು.
ಹಿಂದೆ ಮನೆಯೊಳಗಿನ ಜೀವನಕ್ಕೆ ಸೀಮಿತವಾಗಿದ್ದ ಹೆಣ್ಣು ಮಕ್ಕಳು ಇಂದು ಚಂದ್ರಯಾನದ ಯೋಜನೆಯ ವಿಜ್ಞಾನಿಗಳಾಗಿ ಬೆಳೆದಿದ್ದಾರೆ. ಹಾಗಾಗಿ ಹೆಣ್ಣು ಮಕ್ಕಳು ತಮ್ಮಲ್ಲಿರುವ ಕೀಳಿರಿಮೆ ಬಿಟ್ಟು ಪ್ರತಿಯೊಂದು ಕೆಲಸವನ್ನು ನಾವು ಮಾಡಬಲ್ಲೆವು ಎಂಬ ದೃಢ ನಿಶ್ಚಯ ಹಾಗೂ ದೈರ್ಯ ಮಾಡಬೇಕು. ಇದರಿಂದ ಹೆಣ್ಣು ಮಕ್ಕಳ ಅಭಿವೃದ್ದಿಯ ಜೊತೆಗೆ ದೇಶದ ಅಭಿವೃದ್ದಿಯಾಗುತ್ತದೆ ಎಂದರು.
ಇನ್ನು ನಗರದ ಸರ್ಕಾರ ಪ್ರೌಡಶಾಲೆಯ ಹೆಣ್ಣು ಮಕ್ಕಳ ಅವಶ್ಯಕತೆಗನುಸಾರವಾಗಿ ಶೌಚಾಲಯ ನಿರ್ಮಿಸಿರುವ ರೀಚಿಂಗ್ ಹ್ಯಾಂಡ್ ಹಾಗೂ ಮೆಕ್ಕಾಫೆ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮಕ್ಕಳಲ್ಲಿ ಮನವಿ ಮಾಡಿದರು.
ರೀಚಿಂಗ್ ಹ್ಯಾಂಡ್ ಸಂಸ್ಥೆಯ ವ್ಯವಸ್ಥಾಪಕ ಜೇಮ್ಸ್ ಅಬ್ರಾಹಿಂ ಮಾತನಾಡಿ, ಈಗಾಗಲೇ ವಿದ್ಯಾರ್ಥಿಗಳು ಅದರಲ್ಲಿಯೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಸಾಕಷ್ಟು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಆರೋಗ್ಯಕರವಾಗಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕೆ ಗರ್ಲ್ಸ್ ಗ್ಲೋರಿ ಎಂಬ ಹೆಸರು ಬಂದಿದೆ. ಈ ಯೋಜನೆಯಡಿ ನಗರದ ಸರ್ಕಾರಿ ಪ್ರೌಡಶಾಲೆಗೆ ಅಗತ್ಯವಿರುವ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಿಸಲಾಗಿದ್ದು ಇದರ ಸೂಕ್ತ ನಿರ್ವಹಣೆಯ ಜೊತೆಗೆ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರ ಕುಮಾರ್, ಮುಖ್ಯ ಶಿಕ್ಷಕಿ ಮಂಜುಳ, ಶಿಕ್ಷಕರಾದ ಗೋಪಾಲಕೃಷ್ಣ, ಸೈಯೀದಾ ಇಸ್ರತ್, ಗೋಪಾಲಕೃಷ್ಣ, ಅನ್ನಪೂರ್ಣಹಿರೇಮಠ್, ಮಧು, ಹಿರಿಯ ವಿದ್ಯಾರ್ಥಿ ಎಚ್.ಸುರೇಶ್ ಹಾಜರಿದ್ದರು.