Sidlaghatta : ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ತಂದೆ ತಾಯಿ ಗುರುಗಳಿಗೆ ಕೀರ್ತಿ ತರುವಂತಹ ಸಾಧನೆ ಮಾಡಿ. ನಂತರದ ದಿನಗಳಲ್ಲಿ ಓದಿದ ಶಾಲಾ ಕಾಲೇಜನ್ನು ಮರೆಯದೆ ಪುನಃ ಬಂದು ಮುಂದಿನ ಪೀಳಿಗೆಯವರಿಗೆ ನೆರವಾಗಿ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಶಿಡ್ಲಘಟ್ಟ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಕಾಲೇಜಿನಲ್ಲಿ 450 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಸಂಖ್ಯೆ ಒಂದು ಸಾವಿರಕ್ಕೆ ಏರಬೇಕು. ಈಚೆಗಷ್ಟೇ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಯ ಪರಿಶ್ರಮಕ್ಕೆ ತಕ್ಕ ಫಲವಾಗಿ ಕಾಲೇಜಿಗೆ ನ್ಯಾಕ್ ಬಿ ಮಾನ್ಯತೆ ಲಭಿಸಿದೆ. ಕಾಲೇಜಿಗೆ ಅವಶ್ಯಕತೆಗಳನ್ನು ಪೂರೈಸಲು ನೆರವಾಗುತ್ತೇನೆ. ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುವಂತಾಗಲಿ ಎಂದು ಹೇಳಿದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಂತಾಗಬೇಕೆಂದು ತರಬೇತಿ ಕಾರ್ಯಾಗಾರವನ್ನು ತಾಲ್ಲೂಕು ಆಡಳಿತದಿಂದ ನಡೆಸಲಾಗುತ್ತಿದೆ. ಆ ಮೂಲಕ ನಮ್ಮ ತಾಲ್ಲೂಕಿನ ಯುವಜನರು ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.
ಬುಡಕಟ್ಟು – ಜಾನಪದ ತಜ್ಞ ಡಾ.ಹನಿಯೂರು ಚಂದ್ರೇಗೌಡ ಮಾತನಾಡಿ, ಪಠ್ಯದ ವಿದ್ಯೆ ಕಲಿತರೆ ಸಾಲದು, ವಿವಿಧ ಕೌಶಲಗಳು, ಸಾಂಸ್ಕೃತಿಕ ಪ್ರತಿಭೆಗಳನ್ನು ಹೊಂದಿರಬೇಕಾದುದು ಈ ಕಾಲದ ಅವಶ್ಯಕತೆ. ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕಲೆ ಹಾಗೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡಲ್ಲಿ ಬದುಕಿನಲ್ಲಿ ಪ್ರಗತಿಯನ್ನು ಹಾಗೂ ಸಂತಸವನ್ನು ಕಾಣುವಿರಿ ಎಂದು ಹೇಳಿದರು.
ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪಾರಿತೋಷಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಬಂಕ್ ಮುನಿಯಪ್ಪ, ತಾದೂರು ರಘು, ಪ್ರಾಂಶುಪಾಲ ಡಾ.ವಿ.ವೆಂಕಟೇಶ್, ನಗರಸಭೆ ಸದಸ್ಯರಾದ ಎಲ್.ಅನಿಲ್ ಕುಮಾರ್, ಮಂಜುನಾಥ್, ಮನೋಹರ್, ಪ್ರಾಧ್ಯಾಪಕರಾದ ಡಾ.ಜಿ.ಮುರಳಿ ಆನಂದ್, ಡಾ.ನರಸಿಂಹಮೂರ್ತಿ, ಡಾ.ವಿಜಯೇಂದ್ರಕುಮಾರ್, ಡಾ.ರವಿಕುಮಾರ್, ಡಾ.ಉಮೇಶ್ ರೆಡ್ಡಿ, ಡಾ.ಎನ್.ಎ.ಆದಿನಾರಾಯಣಪ್ಪ, ಎಂ.ಸುನೀತಾ, ವಿ.ಆರ್.ಶಿವಶಂಕರಿ, ಜಿ.ಬಿ.ವೆಂಕಟೇಶ, ಎಸ್.ಗಿರಿಜಾ, ಷಫಿ ಹಾಜರಿದ್ದರು.