ತಾಲ್ಲೂಕಿನ ಗೊರಮಡಗು ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘ ಹಾಗೂ ಗೊರಮಡಗು ಗ್ರಾಮಸ್ಥರ ವತಿಯಿಂದ ಭಾನುವಾರ ಡಾ.ಬಿ.ಆರ್ ಅಂಬೇಡ್ಕರ್ ರವರ 130 ನೇ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಎಂ ನಾರಾಯಣಸ್ವಾಮಿ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆಯ ವಿಷಯ ಎಂದು ಅಭಿಪ್ರಾಯಪಟ್ಟರು.
ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ ಹಾಗೂ ಕಾನೂನು ತಜ್ಞರಾಗಿದ್ದರು. ವಿಶ್ವದ ಹಲವು ದೇಶಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗುತ್ತದೆ. ಅವರು ಜ್ಞಾನದ ಭಂಡಾರ. ಅಂತಹ ಮೇರುವ್ಯಕ್ತಿಯನ್ನು ಮನುವಾದಿಗಳು ಜಾತಿಯ ಕಣ್ಣಿನಲ್ಲಿ ನೋಡುವುದು ಸರಿಯಲ್ಲ ಎಂದರು.
ಸಂಯುಕ್ತ ವ್ಯವಸ್ಥೆ ಪ್ರತಿಪಾದಿಸುವ ಏಕತೆ ಮತ್ತು ಸಮಗ್ರತೆಯ ಆಧಾರದಲ್ಲಿ ಅಂಬೇಡ್ಕರ್ ಅವರು ಭಾರತಕ್ಕೆ ಬೃಹತ್ ಸಂವಿಧಾನ ರಚಿಸಿಕೊಟ್ಟರು. ದೇಶದ ಮೊದಲ ಕಾನೂನು ಸಚಿವರಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಸಮಾನ ಅವಕಾಶ ದೊರಕಿಸಿಕೊಟ್ಟರು. ಕಾರ್ಮಿಕರಲ್ಲಿ ಹೋರಾಟದ ಕಿಚ್ಚು ಹಚ್ಚಿದ ಅವರು ದೇಶದ ಎಲ್ಲ ನಾಗರಿಕರಿಗೂ ಆದರ್ಶಪ್ರಾಯ ಎಂದರು.
ಪ್ರಾಧ್ಯಾಪಕ ಶ್ರೀನಿವಾಸ್ ಮಾತನಾಡಿ ಮೌಢ್ಯ ಅಳಿಸಿ ಹಾಕಲು ಶಿಕ್ಷಣವೇ ಅಸ್ತ್ರ ಎಂದು ಪ್ರತಿಪಾದಿಸಿದ ಹೆಗ್ಗಳಿಕೆ ಡಾ.ಬಿ.ಆರ್.ಅಂಬೇಡ್ಕರ್ ಅವರದ್ದು. ಭಾರತದಲ್ಲಿ ಆರ್ಥಿಕ ಸುರಕ್ಷತೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಮಾರ್ಗದರ್ಶಿ ಸೂತ್ರ ಒದಗಿಸಿದ್ದರು ಎಂದು ಹೇಳಿದರು.
ಜನಪದ ಗಾಯಕ ದೇವರ ಮಳ್ಳೂರು ಮಹೇಶ್ ರವರು ಜನಪದ ಗೀತೆಗಳ ಗಾಯನ ನಡೆಸಿಕೊಟ್ಟರು.
ಪ್ರಾಧ್ಯಾಪಕ ಶ್ರೀನಿವಾಸ್ ಅವರು ಗ್ರಾಮದ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗು ಪದವಿ ವ್ಯಾಸಂಗ ಮಾಡುತ್ತಿರುವ 30 ವಿದ್ಯಾರ್ಥಿಗಳಿಗೆ ಎಫ್‌ಡಿಎ, ಎಸ್‌ಡಿಎ ಪುಸ್ತಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕೊತ್ತನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್, ಪಿಡಿಓ ಅಶ್ವಥ್, ದಸಂಸ ತಾಲ್ಲೂಕು ಸಂಚಾಲಕ ಟಿ.ಎ.ಚಲಪತಿ, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ರೈತ ಘಟಕ ಅಧ್ಯಕ್ಷ ಡಿಶ್ ಮಂಜುನಾಥ, ವಕೀಲರಾದ ನಾಗರಾಜ್, ರಾಮಕೃಷ್ಣ, ಗ್ರಾಮಸ್ಥರಾದ ಲೋಕೇಶ್, ನಾರಾಯಣಸ್ವಾಮಿ, ಮುನಿವೀರಪ್ಪ, ದೇವಿರಪ್ಪ, ನರಸಿಂಹಪ್ಪ, ರವಿ ಹಾಜರಿದ್ದರು.