Tippenahalli, Sidlaghatta : ಪರಿಸರದ ಸುಸ್ಥಿರತೆಗೆ, ಆರೋಗ್ಯಕರ ಸಸ್ಯ ಬೆಳವಣಿಗೆ, ಮಾನವ ಪೋಷಣೆ ಮತ್ತು ನೀರಿನ ಶೋಧನೆಗೆ ಆರೋಗ್ಯಕರ ಮಣ್ಣು ಅತ್ಯಗತ್ಯ. ನಮ್ಮ ಪೂರ್ವಜರು ಕೊಟ್ಟಿರುವ ಉತ್ಕೃಷ್ಟ ಮಣ್ಣನ್ನು ನಮ್ಮ ಮುಂದಿನ ಪೀಳಿಗೆಗೂ ನಾವು ನೀಡಬೇಕು ಎಂದು ಮೇಲೂರಿನ ಪ್ರಗತಿಪರ ರೈತ ಬಿ.ಎನ್.ಸಚಿನ್ ತಿಳಿಸಿದರು.
ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಬಿ.ಎಸ್ಸಿ(ಕೃಷಿ), ಬಿ.ಎಸ್ಸಿ(ಆನರ್ಸ್), ಕೃಷಿ ವ್ಯವಹಾರ ನಿರ್ವಹಣೆ ಮತ್ತು ಬಿ.ಟೆಕ್(ಕೃಷಿ ಎಂಜಿನಿಯರಿಂಗ್) ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವದ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ “ಕೃಷಿ ಕರಗ” – ಕೃಷಿಮೇಳ, ವಸ್ತುಪ್ರದರ್ಶನ ಮತ್ತು ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಣ್ಣಿನ ಉತ್ಪಾದನಾ ಸಾಮರ್ಥ್ಯವನ್ನು ಉನ್ನತ ಮಟ್ಟದಲ್ಲಿಟ್ಟುಕೊಂಡು ಉತ್ತಮ ಸ್ಥಿತಿಯಲ್ಲಿಯೇ ಅದನ್ನು ಮುಂದಿನ ಪೀಳಿಗೆಗೆ ವಹಿಸಿಕೊಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ಪಠ್ಯ ಜ್ಞಾನದ ಜತೆಗೆ ಪ್ರಾಯೋಗಿಕ ಅನುಭವವನ್ನು ಮೂರು ತಿಂಗಳ ಕಾಲ ಹೊಂದಿರುವ ಕೃಷಿ ವಿದ್ಯಾರ್ಥಿಗಳು ಮುಂದೆ ಭವಿಷ್ಯದಲ್ಲಿ ರೈತರ ಕಷ್ಟಕ್ಕೆ ನೆರವಾಗುವಂತೆ ಮತ್ತು ಅವರ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಶ್ರಮಿಸಬೇಕು ಎಂದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ರೈತರು ಬೆಳೆಯುವ ಬೆಳೆಗಳಿಗೆ ಸರ್ಕಾರಗಳು ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ರೈತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕರೆ ಸಾಕು, ಬೇರೆ ಯಾವ ಸಹಾಯಧನ, ನೆರವು ಅಗತ್ಯವಿಲ್ಲ ಎಂದರು.
ಪ್ರಗತಿಪರ ರೈತ ಹುಜಗೂರು ರಾಮಣ್ಣ ಮಾತನಾಡಿ, ಒಂಬತ್ತು ದಿನಗಳು ಗ್ರಾಮದಲ್ಲಿಯೇ ಇದ್ದ ವಿದ್ಯಾರ್ಥಿಗಳು, ಸಮಗ್ರ ಕೃಷಿ, ಸುಧಾರಿತ ತಳಿಗಳು ಮತ್ತು ಬಿತ್ತನೆ ಬೀಜಗಳು, ನಾನಾ ಬೆಳೆಗಳ ಕೃಷಿ ವಿಧಾನ, ನೀರಿನ ಸಂರಕ್ಷಣೆ ಮತ್ತು ಸಮರ್ಪಕ ಬಳಕೆ ಸೇರಿದಂತೆ ಕೃಷಿಗೆ ಸಂಬಂಧಿಸಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ವಸ್ತು ಪ್ರದರ್ಶನದಲ್ಲಿ ರೈತರಿಗೆ ಮಾಹಿತಿ ನೀಡಿದ್ದಾರೆ. ರೈತರ ನೋವು ನಲಿವುಗಳನ್ನು ಕಂಡುಂಡ ವಿದ್ಯಾರ್ಥಿಗಳು ಮುಂದೆ ಭವಿಷ್ಯದಲ್ಲಿ ರೈತರ ನೋವಿಗೆ ದನಿಯಾಗಬೇಕು ಎಂದರು.
ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಶಾಸಕ ಬಿ.ಎನ್.ರವಿಕುಮಾರ್ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ರಮೇಶ್, ಉಪಾಧ್ಯಕ್ಷ ಸಿ.ಮಾರುತಿ, ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಎನ್.ಎಸ್.ಶಿವಲಿಂಗೇಗೌಡ, ಡಾ.ಸಿದ್ದಯ್ಯ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಟಿ.ಎಂ.ಸುರೇಂದ್ರ, ಟಿ.ಪಿ.ಪಾರ್ಥಸಾರಥಿ, ಹಿತ್ತಲಹಳ್ಳಿ ಸುರೇಶ್, ಲಕ್ಷ್ಮಮ್ಮ ಲಕ್ಷ್ಮೀನಾರಾಯಣ, ತಾದೂರು ಮಂಜುನಾಥ್, ಪ್ರಾಧ್ಯಾಪಕರಾದ ಡಾ.ಎಂ.ಟಿ.ಲಕ್ಷ್ಮೀನಾರಾಯಣ, ಡಾ.ಎಂ.ಎ.ಯಶಸ್ವಿನಿ, ಡಾ.ಮಮತ, ಡಾ.ಬಿ.ವಿ.ಶ್ವೇತ, ಡಾ.ಪವನ್, ಡಾ.ಗಣೇಶಮೂರ್ತಿ ಹಾಜರಿದ್ದರು.