ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಂಡಿಗನಾಳ ಗ್ರಾಮ ಪಂಚಾಯಿತಿ ವತಿಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಆರು ಮತ್ತು ಏಳನೇ ತರಗತಿ ಹೆಣ್ಣುಮಕ್ಕಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಅವಕಾಶಗಳನ್ನು ನೀಡುವುದರ ಜೊತೆಗೆ ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಭಾರತದಲ್ಲಿ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಹೆಣ್ಣು ಮಗುವಿನ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು. ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ಅತ್ಯಾಚಾರ, ಅದರಲ್ಲೂ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ, ಬಡತನ, ಅನಕ್ಷರತೆ, ಲಿಂಗತಾರತಮ್ಯ, ಅಪೌಷ್ಟಿಕತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಹೆಣ್ಣಿಗೆ ರಕ್ಷಣೆ ಈ ಆಧುನಿಕ ಯುಗದಲ್ಲೂ ಅನಿವಾರ್ಯ. ಕಲಿತ ಹೆಣ್ಣೂ ಕೂಡ ಉದ್ಯೋಗದ ಸ್ಥಳದಲ್ಲಿ ದೌರ್ಜನ್ಯ ಅನುಭವಿಸುವುದು ನೋಡಿದ್ದೇವೆ. ನಮ್ಮ ಸುತ್ತಲಿನ ವಾತಾವರಣ ಹೇಗಿದೆ ಎಂದರೆ, ಬಾಲಕಿಯರನ್ನು ಆಟವಾಡಲು ಹೊರಗೆ ಕಳುಹಿಸಲು, ಶಾಲೆಗೆ ಕಳುಹಿಸಲು, ಸಂಬಂಧಿಕರ ಅಥವಾ ಸ್ನೇಹಿತರ ಮನೆಗೆ ಕಳುಹಿಸಲೂ ಕೂಡ ಯೋಚಿಸುವ ಪರಿಸ್ಥಿತಿ ಬಂದಿದೆ. ಈ ಎಲ್ಲ ಸಂಕಷ್ಟಗಳನ್ನೂ ಮೀರಿ ನಿಲ್ಲಲು ಹೆಣ್ಣುಮಕ್ಕಳನ್ನು ರಕ್ಷಿಸಿ, ಅವರಿಗೆ ಸೂಕ್ತ ಶಿಕ್ಷಣ ಕೊಡಿಸುವುದು ಮತ್ತು ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ನಾವೂ ಹೆಚ್ಚಿನ ಅರಿವು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಆರು ಮತ್ತು ಏಳನೇ ತರಗತಿ ಹೆಣ್ಣುಮಕ್ಕಳಿಗೆ ಗೋಣಿಚೀಲ ಓಟದ ಸ್ಪರ್ಧೆ, ಸಂಗೀತ ಕುರ್ಚಿ, ನಿಂಬೆಹಣ್ಣು ಮತ್ತು ಚಮಚ ಆಟಗಳನ್ನು ಆಡಿಸಲಾಯಿತು. ವಿಜೇತರಾದ ಇಂದುಶ್ರೀ, ಅಂಕಿತ, ಲಾವಣ್ಯ ಮುಂತಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಬಹುಮಾನಗಳನ್ನು ನೀಡಲಾಯಿತು.
ಹಂಡಿಗನಾಳ ಗ್ರಾಮ ಪಂಚಾಯಿತಿ ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗರತ್ನ, ದ್ಯಾವಪ್ಪ, ಮುನಿವೆಂಕಟಸ್ವಾಮಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷೆ ಶಿಲ್ಪ, ಮುನಿರತ್ನಮ್ಮ, ವೆಂಕಟಮ್ಮ, ಮುಖ್ಯಶಿಕ್ಷಕಿ ಎಂ.ವಿ. ವೆಂಕಟರತ್ನಮ್ಮ, ಎಸ್.ಚಾಂದ್ ಪಾಷ, ಸುಜಾತ ಹಾಜರಿದ್ದರು.