Bhaktarahalli, Sidlaghatta : ಸಮಾಜದಲ್ಲಿ ಲಿಂಗತ್ವ ಆಧಾರದಲ್ಲಿ ಅಸಮಾನತೆ, ದೌರ್ಜನ್ಯ ಅಥವಾ ಅವಕಾಶಗಳನ್ನು ನೀಡದೆ ವಂಚಿಸುವುದಕ್ಕೆ ನಾವು ನೀವೆಲ್ಲರೂ ಕಡಿವಾಣ ಹಾಕಬೇಕಿದೆ. ಲಿಂಗತ್ವ ಸಮಾನತೆ ಇದ್ದಾಗ ಮಾತ್ರ ಸಮಾನತೆಯ ಅಭಿವೃದ್ದಿ ಸಾಧ್ಯ ಎಂದು ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಬಿ.ಇ.ಅಂಜನ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ, ಸಂಜೀವಿನಿ ಡೇ ತಾಲೂಕು ಅಭಿಯಾನ ನಿರ್ವಹಣಾ ಘಟಕ, ಶ್ರೀಶಾರದಾ ಸಂಜೀವಿನಿ ಒಕ್ಕೂಟ ಹಾಗೂ ಬಿಎಂವಿ ಶಾಲೆಯ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಲಿಂಗತ್ವ ಆಧಾರಿತ ದೌರ್ಜನ್ಯವನ್ನು ನಿವಾರಣೆ” ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳನ್ನು ಬೆಳೆಸುವಾಗಲೆ ಅವರಲ್ಲಿ ಗಂಡು ಹೆಣ್ಣು ಎಂಬ ಭೇದ ಭಾವ ತೋರದೆ, ಹೆಣ್ಣು ಮಕ್ಕಳು ಇಂತದ್ದೇ ಕೆಲಸ ಮಾಡಬೇಕು ಇಂತದ್ದು ಮಾಡಬಾರದು, ಹಾಗೆಯೆ ಗಂಡು ಮಕ್ಕಳು ಇಂತದ್ದೇ ಕೆಲಸಗಳನ್ನು ಮಾಡಬೇಕು ಇಂತದ್ದು ಮಾಡಬಾರದು ಎಂದು ನಿಬಂಧನೆ ಹಾಕಬಾರದು.
ಅಗತ್ಯ ಬೀಳುವ ಎಲ್ಲ ಕೆಲಸಗಳನ್ನು ಅವರ ದೈಹಿಕ ಸಾಮರ್ಥ್ಯದ ಮೇಲೆ ಎಲ್ಲರೂ ಮಾಡಬೇಕು ಎಂಬುದನ್ನು ಮನೆಗಳಲ್ಲಿಯೆ ಮಕ್ಕಳಿಗೆ ತಿಳಿ ಹೇಳುವುದರಿಂದ ಮಕ್ಕಳಲ್ಲಿ ಲಿಂಗ ತಾರತಮ್ಯದಂತ ಭಾವನೆ ಬೆಳೆಯುವುದಿಲ್ಲ ಎಂದು ವಿವರಿಸಿದರು.
ಲಿಂಗ ತಾರತಮ್ಯ ಮಾಡುವುದರಿಂದ ಮಕ್ಕಳಲ್ಲಿ ಕೀಳರಿಮೆಯ ಭಾವನೆ ಮನೆ ಮಾಡುತ್ತದೆ. ಅದು ಅವರನ್ನು ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿಯುವಂತೆ ಮಾಡಲಿದ್ದು ಅದು ಸಮಾಜದ ಅಭಿವೃದ್ದಿ ಸಮಾನತೆಯ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಗ್ರಾಮದಲ್ಲಿ ಲಿಂಗತ್ವ ಆಧಾರದಲ್ಲಿ ದೌರ್ಜನ್ಯ, ಅಸಮಾನತೆಯ ಭಾವನೆ ತೋರುವುದು ಬೇಡ ಎಂದು ಸಂದೇಶ ಸಾರುವ ಘೋಷಣೆಗಳು ಹಾಗೂ ಭಿತ್ತಿ ಚಿತ್ರಗಳೊಂದಿಗೆ ಶಾಲಾ ಮಕ್ಕಳು ಮೆರವಣಿಗೆ ನಡೆಸಿದರು.
ಬಿಎಂವಿ ಶಾಲೆಯ ವೆಂಕಟಮೂರ್ತಿ, ಪ್ರಕಾಶ್, ವೆಂಕಟೇಶ್, ಶಾರದಾ ಸಂಜೀವಿನಿ ಒಕ್ಕೂಟದ ಭಾರತಮ್ಮ, ಮಮತ, ಶಿಲ್ಪ, ಅಶ್ವಿನಿ ಹಾಜರಿದ್ದರು.