Sidlaghatta : ಹುಟ್ಟತ್ತಾ ಎಲ್ಲರೂ ಸಮಾನರೇ. ಭೌತಿಕವಾಗಿ ಕೆಲವೊಂದು ವ್ಯತ್ಯಾಸಗಳಿರಬಹುದು ಅಷ್ಟೇ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿ ತೋರಿಸಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಲಾವಾರ ತಾಲ್ಲೂಕು ಪಂಚಾಯಿತಿ ಶಿಡ್ಲಘಟ್ಟ ಮತ್ತು ಫೌಂಡೇಷನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆ ಸಹಯೋಗದಲ್ಲಿ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ “ಲಿಂಗ ಸಮಾನತೆ ಮತ್ತು ವೈವಿಧ್ಯತೆ” ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾವು ಚಿಕ್ಕ ವಯಸ್ಸಿನಿಂದಲೇ ಹೆಣ್ಣು ಮತ್ತು ಗಂಡು ಎಂಬ ಭೇದಭಾವಗಳನ್ನು ಬಿತ್ತುತ್ತಾ ಸಮಾಜದಲ್ಲಿ ಲಿಂಗ ಅಸಮಾನತೆಗೆ ಕಾರಣೀಭೂತರಾಗಿದ್ದೇವೆ. ಆಧುನಿಕ ಯುಗದಲ್ಲೂ ಮೌಢ್ಯತೆಯನ್ನು ಮೆರೆಯುತ್ತಿದ್ದೇವೆ. ಮಹಿಳೆಯರ ಭಾಗವಹಿಸುವಿಕೆ ಇಲ್ಲದೆ ಯಾವುದೇ ಕ್ಷೇತ್ರದಲ್ಲೂ ಸುಸ್ಥಿರ ಅಭಿವೃದ್ಧಿಯನ್ನು ನಿರೀಕ್ಷೆ ಮಾಡಲು ಸಾದ್ಯವಿಲ್ಲ. ಸಮಾಜದಲ್ಲಿರುವ ಲಿಂಗ ತಾರತಮ್ಯ ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಇಂತಹ ತರಬೇತಿ ಕಾರ್ಯಕ್ರಮಗಳು ತುಂಬಾ ಸಹಕಾರಿಯಾಗಿದೆ ಎಂದರು.
ನೂರಾರು ವರ್ಷಗಳಿಂದ ಬಂದಿರುವ ಅವೈಜ್ಞಾನಿಕ ರೂಢಿಬದ್ದ ಸಂಪ್ರದಾಯಗಳನ್ನು ಬದಲಾವಣೆ ತರುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳು ಕಾರ್ಯಪ್ರವೃತ್ತರಾಗಬೇಕು. ತಾಯಿಯ ಗರ್ಭದಲ್ಲಿರುವ ಮಗುವಿನ ಆರೋಗ್ಯ ಮತ್ತು ಆರೈಕೆಯಿಂದ ಹಿಡಿದು ವೃದ್ಯಾಪ್ಯದವರೆಗೂ ಮತ್ತು ಆ ನಂತರವೂ ಕೂಡ ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ತುಂಬಾ ಮಹತ್ತರವಾಗಿದೆ.
ರಾಜ್ಯ ಮಟ್ಟದ ತರಬೇತಿ ಅಧಿಕಾರಿ ಅಗತಾಶೇಖರ್ ಮಾತನಾಡಿ, ಮೂಢನಂಬಿಕೆ ಮತ್ತು ಮೌಢ್ಯತೆಗಳಿಂದ ಹಲವಾರು ವರ್ಷಗಳಿಂದ ಮಹಿಳೆಯರ ಮೇಲೆ ಹಾಕಿರುವ ಸಂಕೋಲೆಗಳನ್ನು ಬಿಡಿಸಿಕೊಳ್ಳಲು ಮಹಿಳೆಯರೇ ಸದೃಢರಾಗಿ ಸಬಲರಾಗಬೇಕು ಮತ್ತು ಪುರಷರು ಇದಕ್ಕೆ ಸಹಕಾರವನ್ನು ಕೋಡಬೇಕು ವಿವರಿಸಿದರು. ಲಿಂಗ ಮತ್ತು ಲಿಂಗತ್ವದ ಕುರಿತು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ತರಬೇತಿಯನ್ನು, ಅರಿವನ್ನು ಮೂಡಿಸಿದರು.
ಎಫ್ಇಎಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಎನ್. ರಮೇಶ್ ಮಾತನಾಡಿ, ವಿಶ್ವಸಂಸ್ಥೆಯ 195 ಸದಸ್ಯ ರಾಷ್ಟ್ರಗಳು 2015 ಸೆಪ್ಟಂಬರ್ 25 ರಂದು ಸೇರಿ 2030ರ ಒಳಗೆ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮಾಡಿದ್ದು, ಇದರಲ್ಲಿ ಪ್ರಮುಖವಾಗಿ 5 ನೇಯ ಗುರಿ ಲಿಂಗ ಸಮಾನತೆಯಾಗಿದೆ. ಯಾವುದೇ ಅಭಿವೃದ್ಧಿಯನ್ನು ಮಹಿಳೆಯರ ಭಾಗವಹಿಸುವಿಕೆಯು ಇಲ್ಲದೇ ನಿರೀಕ್ಷೆ ಮಾಡುವುದು ಸಾದ್ಯವಿಲ್ಲ ಎಂದು ಹೇಳಿದರು.
ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಮಾತನಾಡಿ, ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಗ್ರಾಮ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಲ್ಪಿಸುವ ಮೂಲಕ ಸಮಾಜದಲ್ಲಿರುವ ಲಿಂಗ ತಾರತಮ್ಯ ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಕೆಲಸ ಕಾರ್ಯಗಳಿಗೆ ಬುನಾದಿ ಹಾಕುವ ಕೆಲಸಗಳನ್ನು ಪ್ರಾರಂಬಿಸಬೇಕಿದೆ ಎಂದರು.
ಎಲ್ಲಾ ಗ್ರಾ. ಪಂ ಅಧ್ಯಕ್ಷರು, ಉಪಾಧ್ಯಕ್ಷರುಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಎಫ್.ಇ.ಎಸ್ ಸಂಸ್ಥೆಯ ಸಂಯೋಜಕರಾದ ಉತ್ತಣ್ಣ, ಲೀಲಾವತಿ, ವಿಕೇಶ್ ಹಾಗೂ ಪಂಚಾಯಿತಿ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.