Home News “ಜಿಲ್ಲಾಡಳಿತ ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯಿಂದ ಅಹವಾಲು ಸ್ವೀಕಾರ

“ಜಿಲ್ಲಾಡಳಿತ ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯಿಂದ ಅಹವಾಲು ಸ್ವೀಕಾರ

0

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ (Bashettahalli) ಹೋಬಳಿಯ ಗಂಜಿಗುಂಟೆ (Ganjigunte) ಗ್ರಾಮದಲ್ಲಿ ಶುಕ್ರವಾರ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ವತಿಯಿಂದ “ಜಿಲ್ಲಾಡಳಿತ ನಡೆ ಹಳ್ಳಿ ಕಡೆ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಆಗಮಿಸಿದ ಜಿಲ್ಲಾಧಿಕಾರಿ ಆರ್.ಲತಾ (Deputy Commissioner R Latha) ಅವರನ್ನು ಗ್ರಾಮಸ್ಥರು ಕಳಶ ಹೊತ್ತ ಹೆಣ್ಣುಮಕ್ಕಳ ಮೂಲಕ ಅದ್ದೂರಿಯಾಗಿ ಸ್ವಾಗತ ಕೋರಿದರು.

 ಗಂಜಿಗುಂಟೆ ಗ್ರಾಮವನ್ನು ಪ್ರವೇಶಿಸುವ ರಸ್ತೆಯಲ್ಲಿ ಹಳ್ಳಿಯ ಹೆಣ್ಣುಮಕ್ಕಳು ಜಿಲ್ಲಾಧಿಕಾರಿ ಅವರನ್ನು ಆರತಿ ಬೆಳಗುವ ಮೂಲಕ ಸಂಭ್ರಮದ ಸ್ವಾಗತ ನೀಡಿದರು. ತಮಟೆ ವಾದನದೊಂದಿಗೆ ಹೆಣ್ಣುಮಕ್ಕಳು ಅವರನ್ನು ಗ್ರಾಮದೊಳಕ್ಕೆ ಕರೆದುಕೊಂಡು ಹೋದರು. ಹಳ್ಳಿಯು ತಳಿರು ತೋರಣದಿಂದ ಸಿಂಗಾರಗೊಂಡಿತ್ತು. ಹಬ್ಬದ ಸಡಗರ, ಸಂಭ್ರಮದ ವಾತಾವರಣ ಮನೆ ಮನೆಗಳಲ್ಲಿ ಕಳೆಗಟ್ಟಿತ್ತು.

 ಜಿಲ್ಲಾಧಿಕಾರಿಯವರು ಮೊದಲಿಗೆ ಗ್ರಾಮದ ನರಸಿಂಹಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ಆ ನಂತರ ಗಿಡವಿತರಣಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಗಿಡಗಳನ್ನು ವಿತರಿಸಿದರು. ಖಾಲಿ ಸ್ಥಳಗಳಲ್ಲಿ  ಗಿಡ ನೆಟ್ಟು ಮರ ಬೆಳೆಸುವಿಕೆ ಹಾಗೂ ಹಸಿರು ಪರಿಸರದ ಮಹತ್ವ ಹಾಗೂ ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕೆಂದು ಹೇಳಿದರು. ಸಾರ್ವಜನಿಕರ ಅಹವಾಲುಗಳನ್ನು ಹಾಗೂ ಸಮಸ್ಯೆಗಳನ್ನು ಅವರು ಆಲಿಸಿದರು‌.

ಒತ್ತುವರಿಯಿಂದ ತೆರವುಗೊಂಡ ಜಮೀನಿನಲ್ಲಿ ಅರಣ್ಯೀಕರಣಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ

ಕಾರ್ಯಕ್ರಮದ ಅಂಗವಾಗಿ ಗಂಜಿಗುಂಟೆ ಗ್ರಾಮದ ಹತ್ತಿರದ ಕಲ್ಯಾಣಿಗೆ ಜಿಲ್ಲಾಧಿಕಾರಿ ಆರ್.ಲತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಲ್ಯಾಣಿಯ ಜೀರ್ಣೋದ್ಧಾರ ಮಾಡುವ ಬಗ್ಗೆ  ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕಲ್ಯಾಣಿಯ ಪಕ್ಕದಲ್ಲಿ ಒತ್ತುವರಿಗೊಂಡಿದ್ದ  3 ಎಕರೆ ಜಮೀನನ್ನು  ಕಳೆದ 15  ದಿನಗಳ ಹಿಂದೆ ತೆರವುಗೊಳಿಸಲಾಗಿತ್ತು. ಈ  ಜಮೀನಿನಲ್ಲಿ ಗಿಡ ನೆಡುವ ಮೂಲಕ ಜಿಲ್ಲಾಡಳಿತ, ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ   ಅರಣ್ಯೀಕರಣಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

 ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎಸ್.ರಾಜೀವ್,  ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಗಂಜೆಗುಂಟೆ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version