Sidlaghatta : ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮುಂದಿನ ಲೋಕಸಭಾ ಚುನಾವಣೆ ಸೇರಿದಂತೆ ಎಲ್ಲ ಸ್ಥಳೀಯ ಚುನಾವಣೆಗಳನ್ನು ನಾವು ಧೈರ್ಯವಾಗಿ ಸಮರ್ಥವಾಗಿ ಎದುರಿಸಬಹುದು ಎಂದು ಎಬಿಡಿ ಟ್ರಸ್ಟ್ ಮುಖ್ಯಸ್ಥ, ಕೆಪಿಸಿಸಿ ಸಂಯೋಜಕ ರಾಜೀವ್‌ಗೌಡ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಗಣಪನ ಹಬ್ಬದಂದು ಯುವಕರು ಗಣಪನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಹಣಕಾಸಿನ ನೆರವು ನೀಡಿ ಅವರು ಮಾತನಾಡಿದರು.
ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಈಗಾಗಲೆ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದ್ದು ಇನ್ನುಳಿದ ಯುವ ಶಕ್ತಿ ಗ್ಯಾರಂಟಿಯನ್ನು ಡಿಸೆಂಬರ್ ಒಳಗೆ ಅನುಷ್ಠಾನಗೊಳಿಸಲಾಗುತ್ತದೆ ಎಂದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿಗೆ ಬದ್ಧವಾಗಿದ್ದು ಜನ ಸಾಮಾನ್ಯರ ವಿಶ್ವಾಸವನ್ನು ಉಳಿಸಿಕೊಂಡಿದೆ. ಗ್ಯಾರಂಟಿಗಳ ಮೂಲಕ ಜನ ಸಾಮಾನ್ಯರ ಆರ್ಥಿಕ ಮಟ್ಟ ಸುಧಾರಣೆಯನ್ನು ಕೈಗೊಂಡಿದೆ ಎಂದು ಹೇಳಿದರು.
ಈ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಮುಂಬರುವ ಲೋಕಸಭೆ ಚುನಾವಣೆ ಸೇರಿ ಎಲ್ಲ ಸ್ಥಳೀಯ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಬೇಕಿದೆ. ಮತ್ತೊಮ್ಮೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ನಾವೆಲ್ಲರೂ ಸಂಘಟನಾತ್ಮಕವಾಗಿ ಮಾಡಬೇಕಿದೆ ಎಂದು ಕೋರಿದರು.
ಕಳೆದ ಮೂರು ವರ್ಷಗಳಿಂದಲೂ ಗಣಪತಿ ಹಬ್ಬವನ್ನು ಕ್ಷೇತ್ರದಲ್ಲಿ ಆಚರಿಸಲು ನನ್ನ ಕೈಲಾದ ನೆರವನ್ನು ನೀಡುತ್ತಾ ಬಂದಿದ್ದು, ಈ ವರ್ಷವೂ ಕ್ಷೇತ್ರದಲ್ಲಿನ ಎಲ್ಲ ಹಳ್ಳಿಗಳಲ್ಲೂ ಯುವಕರು ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸಲು ಹಣಕಾಸಿನ ನೆರವು ನೀಡುತ್ತಿದ್ದೇನೆ ಎಂದರು.
ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್‌ಗೌಡ ಮಾತನಾಡಿ, ಕಳೆದ ಚುನಾವಣೆಯಲ್ಲಿ ಸೋತ ನಂತರ ರಾಜೀವ್‌ಗೌಡರು ಕ್ಷೇತ್ರವನ್ನು ಬಿಡುತ್ತಾರೆ ಕಾಣಿಸಿಕೊಳ್ಳೊಲ್ಲ ಎಂದು ಬಹುತೇಕ ಮಂದಿ ಕುಹಕವಾಡಿದರು. ಮಾನಸಿಕವಾಗಿ ಕುಗ್ಗುವಂತೆ ಮಾಡಿದರು.
ಆದರೆ ರಾಜೀವ್‌ಗೌಡರು ಈ ಕ್ಷೇತ್ರವನ್ನು ಎಂದಿಗೂ ಬಿಡುವುದಿಲ್ಲ. ಸೋಲಾಗಲಿ ಗೆಲುವಾಗಲಿ ಈ ಕ್ಷೇತ್ರದ ಜನರೊಂದಿಗೆ ಕಷ್ಟ ಸುಖದಲ್ಲಿ ಬೆರೆತು ಸಾಗುತ್ತಾರೆ. ಕ್ಷೇತ್ರದಲ್ಲಿ ಆಂಬ್ಯುಲೆನ್ಸ್ ಸೇವೆ ಮುಂದುವರೆದಿದ್ದು ಸುಮಾರು 25 ಸಾವಿರ ಮಂದಿಗೆ ಆಂಬ್ಯುಲೆನ್ಸ್ ಸೇವೆ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಗಣೇಶನ ಪ್ರತಿಷ್ಠಾಪನೆಗೆ ತಲಾ 5 ಸಾವಿರ ರೂ.ಹಣಕಾಸಿನ ನೆರವು ನೀಡಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಟಿ.ಕೆ.ನಟರಾಜ್, ಗೋವಿಂದರಾಜು,ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಬಿ.ವಿ.ಮುನೇಗೌಡ, ವರದಣ್ಣ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಯಪ್ಪಲ್ಲಿ ಅಶ್ವತ್ಥನಾರಾಯಣರೆಡ್ಡಿ, ಹೀರೆಬಲ್ಲ ಕೃಷ್ಣಪ್ಪ, ಹಂಡಿಗನಾಳ ಜಯರಾಂ ಹಾಜರಿದ್ದರು.