Mallur, Sidlaghatta : ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಸರ್ಕಾರ ಅಮೃತಮಹೋತ್ಸವದ ಸಂಭ್ರಮಾಚರಣೆ ಮಾಡಲು ಘೋಷಣೆ ಮಾಡಿದೆ. ಆಗಸ್ಟ್ 13 ರಿಂದ 15 ರವರೆಗೆ ಹರ್‌ಘರ್ ತಿರಂಗಾ ಅಭಿಯಾನವನ್ನೂ ಘೋಷಣೆ ಮಾಡಿದೆ. ಈ ಕಾರ್ಯಕ್ರಮಗಳ ಭಾಗವಾಗಿ ಪ್ರತಿಜಿಲ್ಲೆಯಲ್ಲಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ (Freedom Fighters) ಮನೆಗಳಿಗೆ ಜಿಲ್ಲಾಡಳಿತ ಭೇಟಿ ನೀಡಿ ಅವರನ್ನು ಸನ್ಮಾನಿಸುವ ಮೂಲಕ ಗೌರವ ಸಮರ್ಪಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಮಹನೀಯರನ್ನು ಗೌರವಿಸುವುದೇ ಒಂದು ಪುಣ್ಯದ ಕೆಲಸ ಮತ್ತು ಭಾಗ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ MTB ನಾಗರಾಜ್ ತಿಳಿಸಿದರು.
ಸ್ವಾತಂತ್ರ್ಯಅಮೃತಮಹೋತ್ಸವದ ಅಂಗವಾಗಿ ಮಂಗಳವಾರ ತಾಲ್ಲೂಕಿನ ಮಳ್ಳೂರು ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ 99 ವರ್ಷದ ಮಳ್ಳೂರು ಜಿ.ನಾಗಪ್ಪ (G Nagappa) ಅವರನ್ನು ಜಿಲ್ಲಾಡಳಿತದ ಪರವಾಗಿ ಫಲಪುಷ್ಪ ತಾಂಬೂಲದ ಜೊತೆಗೆ ರಾಷ್ಟ್ರಧ್ವಜ ನೀಡಿ ಗೌರವ ಸಮರ್ಪಣೆ ಮಾಡಿ ಅವರು ಮಾತನಾಡಿದರು.
ಸಾವಿರಾರು ಜನರ ತ್ಯಾಗ, ಬಲಿದಾನ ಮತ್ತು ಹೋರಾಟಗಳಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಹಿರಿಯ ಚೇತನಗಳನ್ನು ಸ್ಮರಿಸುವುದು ಮತ್ತು ಗೌರವಿಸುವುದು ದೇಶದ ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ. ಈ ಹೋರಾಟಗಾರರು ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯ ಎಂದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಹರ್‌ಘರ್ ತಿರಂಗಾ ಅಭಿಯಾನವು ದೇಶವಾಸಿಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಯುವಜನರಲ್ಲಿ ದೇಶಭಕ್ತಿ ಮತ್ತು ದೇಶಪ್ರೇಮವನ್ನು ಪ್ರೇರೇಪಿಸುತ್ತಿದೆ. ದೇಶದ ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ಜನರ ತ್ಯಾಗ ಬಲಿದಾನಗಳಿವೆ. ಇಂದು ಕೋಟ್ಯಂತರ ಜನ ಭಾರತೀಯರು ಸ್ವತಂತ್ರವಾಗಿ ಮತ್ತು ನೆಮ್ಮದಿಯಿಂದ ಬದುಕುತ್ತಿರುವಲ್ಲಿ ದೇಶಪ್ರೇಮಿ ಸ್ವಾತಂತ್ರ್ಯಯೋಧರ ಅವಿರತ ಹೋರಾಟ ಮತ್ತು ಶ್ರಮವಿದೆ. ಸ್ವಾತಂತ್ರ್ಯಕ್ಕಾಗಿ ದುಡಿದವರನ್ನು ಸನ್ಮಾನಿಸಿ ಗೌರವಿಸುವುದು ಮತ್ತು ನೆನಪಿಸಿಕೊಳ್ಳುವುದು ಈವತ್ತಿನ ಪೀಳಿಗೆಗೆ ಅತ್ಯಂತ ಹೆಮ್ಮೆಯ ಸಂಗತಿ ಮತ್ತು ಸೌಭಾಗ್ಯ. ಅವರ ಆಶಯಗಳಿಗೆ ಅನುಗುಣವಾಗಿ ನಾವು ವರ್ತಮಾನ ಮತ್ತು ಭವಿಷ್ಯದಲ್ಲಿ ನಡೆದುಕೊಳ್ಳಬೇಕು ಎಂದರು.
ಸ್ವಾತಂತ್ರ್ಯಅಮೃತ ಮಹೋತ್ಸವದ ಪ್ರಯುಕ್ತ ಪ್ರಧಾನಮಂತ್ರಿಗಳ ಕರೆಯ ಮೇರೆಗೆ ಪ್ರತಿಮನೆ, ಕಚೇರಿ ಮತ್ತು ತಾವು ಕೆಲಸ ಮಾಡುವ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದು ಒಂದು ರೀತಿಯ ಭಾವನಾತ್ಮಕ ಸಂಬಂಧವಾಗಿದೆ. ಈ ರೀತಿ ದೇಶದ ಎಲ್ಲರೂ ತಿರಂಗಾ ಹಾರಿಸುವುದರಿಂದ ದೇಶದ ಸಮಸ್ತ ಜನರ ಒಗ್ಗಟ್ಟು ತಿಳಿಯಲಿದೆ. ಜೊತೆಗೆ ದೇಶವಾಸಿಗಳ ಐಕ್ಯತೆಯ ಸಂದೇಶ ವಿಶ್ವಮಟ್ಟದಲ್ಲಿ ರವಾನೆಯಾಗಲಿದೆ. ಭಾರತೀಯರೆಲ್ಲರೂ ಒಂದೇ. ಶಾಂತಿ, ಅಹಿಂಸಾ ತತ್ವಗಳ ಪ್ರಿಯರಾಗಿರುವ ಭಾರತೀಯರು ಸೋದರತ್ವಕ್ಕೆ ಮೇಲ್ಪಂಕ್ತಿಯನ್ನು ಹಾಕಿಕೊಂಡಿದ್ದು ಅದನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಹರ್‌ಘರ್ ತಿರಂಗಾ ಸಂದೇಶ ನೀಡುತ್ತದೆ ಎಂದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಬದುಕಿನ ಕುರಿತು ಸಾಕ್ಷ್ಯಚಿತ್ರವನ್ನು ತಯಾರಿಸಿ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು. ಅಲ್ಲದೇ ಅಂದಿನ ಭಾರತದ ಚಿತ್ರಣವನ್ನೂ ಯುವಪೀಳಿಗೆಗೆ ತಲುಪಿಸುವ ಚಿಂತನೆಯಿದೆ. ಪ್ರಮುಖ ರಸ್ತೆ, ಬಡಾವಣೆ ಮತ್ತು ಕಟ್ಟಡಗಳಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ನಾಮಕರಣ ಮಾಡುವ ಮೂಲಕ ಅವರಿಗೆ ಗೌರವ ಸಮರ್ಪಿಸುವ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸರ್ಕಾರದ ಪರವಾಗಿ ಜಿಲ್ಲಾಡಳಿತ ನೀಡಿದಗೌರವವನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ಸ್ವಾತಂತ್ಯ ಹೋರಾಟಗಾರ ಮಳ್ಳೂರು ಜಿ.ನಾಗಪ್ಪ, ಸ್ವಾತಂತ್ರ್ಯದ ಆಶಯಗಳನ್ನು ಯುವಜನತೆ ಅರಿತು ನಡೆದುಕೊಳ್ಳಬೇಕು. ಈ ಹಿಂದೆ ಇದ್ದ ಕಾಲಕ್ಕೂ ಈವತ್ತಿನ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೊದಲಿನ ಸ್ಥಿತಿಯನ್ನು ಈವತ್ತಿನ ಸ್ಥಿತಿಗೆ ಹೋಲಿಸಿಕೊಂಡಾಗ ತುಂಬಾ ಏರುಪೇರಾಗಿದೆ. ಪರಿಸರಕೆಟ್ಟಿದೆ. ಇದರಿಂದ ನೋವಾಗಿದೆ. ಸ್ವಾತಂತ್ರ್ಯ ಬಂದ ನಂತರ ಕೆಲ ವರ್ಷಗಳ ಅವಧಿಯಲ್ಲಿ ರಾಜಕಾರಣ, ಜನರ ಮನೋಭಾವ ಎಲ್ಲವೂ ಚೆನ್ನಾಗಿತ್ತು. ನಂತರ ಎಲ್ಲವೂ ಕೆಟ್ಟುಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಳ್ಳೂರು ಜಿ.ನಾಗಪ್ಪ ಅವರ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್‌ಕಾರ್ಡ್ ಸಂಖ್ಯೆಯನ್ನು ಜೋಡಣೆ ಮಾಡುವ ಮೂಲಕ ಶಿಡ್ಲಘಟ್ಟ ತಾಲ್ಲೂಕಿನ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಸಂಖ್ಯೆ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ತಹಶೀಲ್ದಾರ್ ರಾಜೀವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಸೌಭಾಗ್ಯ ಹಾಜರಿದ್ದರು.