Devaramallur, Sidlaghatta : ರೈತರು ತಮ್ಮಲ್ಲಿರುವ ಒಣಮೇವು, ಬದುಗಳಲ್ಲಿ ಬೆಳೆಯುವ ಜೋಳದ ಕಡ್ಡಿಗಳು, ಹಿಪ್ಪುನೇರಳೆ ಸೊಪ್ಪಿನ ಉಳಿಕೆ, ಸುಬಾಬುಲ್ ಸೊಪ್ಪು, ಹಾಲು ಸೊಸೈಟಿಯಿಂದ ಕೊಡುವ ಪಶು ಆಹಾರವನ್ನೆಲ್ಲಾ ಬಳಸಿಕೊಂಡು ಹಸುಗಳಿಗೆ ಆಹಾರ ಕೊರತೆ ನೀಗಿಸಿ, ಹಾಲು ಉತ್ಪಾದನೆಯನ್ನು ಸರಿದೂಗಿಸಬೇಕು ಎಂದು ಪಶು ವೈದ್ಯಾಧಿಕಾರಿ ಡಾ.ಪ್ರಶಾಂತ್ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶನಿವಾರ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಹಾಲು ಒಕ್ಕೂಟದ ಶಿಡ್ಲಘಟ್ಟದ ಶಿಬಿರ, ಹಾಗೂ ದೇವರಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ದೇವರಮಳ್ಳೂರು ಎಂ.ಪಿ.ಸಿ.ಎಸ್ ಆವರಣದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಈ ಶಿಬಿರದಲ್ಲಿ ಕೆಚ್ಚಲು ಬಾವು ಮತ್ತು ಚರ್ಮ ರೋಗ ಜಾನುವಾರುಗಳಲ್ಲಿ ಹೆಚ್ಚಾಗಿ ಕಂಡುಬಂದಿವೆ. ಸೂಕ್ತ ಔಷಧಿಗಳನ್ನು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ರೈತರಿಗೆ ತಿಳಿಸಿಕೊಟ್ಟು, ಹಸುಗಳ ಆರೋಗ್ಯಕ್ಕೆ ಸೂಕ್ತ ಆಹಾರದ ಬಗ್ಗೆಯೂ ಮಾಹಿತಿ ನೀಡಿದ್ದೇವೆ ಎಂದರು.
ಪಶು ವೈದ್ಯರಾದ ಡಾ.ಎನ್.ಮಂಜೇಶ್, ಡಾ.ಮುನಿಕೃಷ್ಣ, ಡಾ.ಚಂದನ್, ಎಂ.ಪಿ.ಸಿ.ಎಸ್ ಅಧ್ಯಕ್ಷ ಕಂಪನಿ ರವಿಚಂದ್ರ, ಕಾರ್ಯದರ್ಶಿ ಮಂಜುನಾಥ್, ಅಧಿಕಾರಿಗಳಾದ ವೀರಭದ್ರ ಕೋರಿ, ಕೃಷ್ಣಪ್ಪ ಹಾಜರಿದ್ದರು.