ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮದ ಶ್ರೀದೇವಿ ಭೂದೇವಿ ಸಮೇತ ಶ್ರೀ ಚನ್ನಕೇಶವ ಸ್ವಾಮಿ ವಾರ್ಷಿಕ ಮಹೋತ್ಸವ ಹಾಗೂ ಸಮುದಾಯ ಭವನ ವೃದ್ಧಾಶ್ರಮ ಉದ್ಘಾಟನಾ ಸಮಾರಂಭ ಮತ್ತು ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ವಿಜಯಪುರ ಶಾಖಾ ಮಠದ ಮಹದೇವಸ್ವಾಮಿ ಅವರು ಮಾತನಾಡಿದರು.
ಮದುವೆ ಸಮಾರಂಭಗಳು ಸರಳವಾಗಿರಬೇಕು. ಪ್ರೀತಿ ಪ್ರೇಮಗಳ ಆತ್ಮೀಯ ಮಂಗಳ ಕಾರ್ಯಕ್ರಮಗಳಾಗಬೇಕು. ಪರಸ್ಪರ ಅರ್ಥ ಮಾಡಿಕೊಂಡು ಜೀವನ ನಡೆಸಿದಾಗ ದಾಂಪತ್ಯ ಜೀವನ ಆದರ್ಶಮಯ ಹಾಗೂ ಸಂತಸದಾಯಕವಾಗಿರುತ್ತದೆ ಎಂದು ಅವರು ತಿಳಿಸಿದರು.
ಸುಖ ದುಃಖವನ್ನು ಸಮಾನವಾಗಿ ಸ್ವೀಕರಿಸಿ ಜೀವನ ನಡೆಸಬೇಕು. ಯಾವತ್ತೂ ಕಿತ್ತಾಡಬೇಡಿ, ತಾಳ್ಮೆ ಕಳೆದುಕೊಳ್ಳದೆ ಬದುಕನ್ನು ನಡೆಸಿ. ಮಿತಸಂತಾನ ಇರಲಿ, ಮಕ್ಕಳಿಗೆ ಸಂಸ್ಕಾರ ಕಲಿಸಿ. ಗುರುಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಬೇಕು. ಬಾಳನ್ನು ಅರ್ಥಪೂರ್ಣವಾಗಿಸುವ ದಾರಿಯಲ್ಲಿ ಜೊತೆಯಾಗಿ ಸಾಗಬೇಕು ಎಂದರು.
ಈ ಸಂದರ್ಭದಲ್ಲಿ 7 ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕೋಲಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಸುಭ್ರಮಣಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಗುತ್ತಿಗೆದಾರ ಟಿ. ಕೆ. ನಟರಾಜ್ ಹಾಜರಿದ್ದರು.