Sidlaghatta : ಶಿಡ್ಲಘಟ್ಟ ನಗರದ ಬಸ್ ನಿಲ್ದಾಣದಿಂದ ಕೋಟೆ ವೃತ್ತದವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಇರುವ ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿರುವ ಪಾದಚಾರಿ (ಫುಟ್‌ಪಾತ್) ಮಾರ್ಗದಲ್ಲಿ ಅನಧಿಕೃತವಾಗಿ ಇಡಲಾಗಿದ್ದ ನಾಮಫಲಕಗಳು ಸೇರಿದಂತೆ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿದ್ದ ಫುಟ್‌ಪಾತ್ ವ್ಯಾಪಾರಿಗಳನ್ನು ನಗರಸಭೆ ಪೌರಾಯುಕ್ತ ಮಂಜುನಾಥ್ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ತೆರವುಗೊಳಿಸಿದರು.
ಫುಟ್‌ಪಾತ್ ವ್ಯಾಪಾರಸ್ಥರ ತೆರವು ಕಾಮಗಾರಿಗೆ ಚಾಲನೆ ನೀಡಿದ ಪೌರಾಯುಕ್ತ ಮಂಜುನಾಥ್ ಮಾತನಾಡಿ ನಗರದ ಮುಖ್ಯರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದು ಸೇರಿದಂತೆ ಬಹುತೇಕ ಅಂಗಡಿಗಳವರು ತಮ್ಮ ಅಂಗಡಿ ಸರಕನ್ನು ಅಂಗಡಿಯಿAದ ಹೊರಗಡೆ ರಸ್ತೆಯಲ್ಲಿ ಇಟ್ಟು ವ್ಯಾಪಾರ ಮಾಡುವುದರಿಂದ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸುವುದು ಕಷ್ಟಕರವಾಗುತ್ತದೆ. ಈ ಬಗ್ಗೆ ನಾಗರೀಕರು ಹಲವಾರು ಭಾರಿ ನಗರಸಭೆಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಸಿಬ್ಬಂದಿಯೊAದಿಗೆ ಇಂದು ಫುಟ್‌ಪಾತ್ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.
ಪಾದಚಾರಿ ಮಾರ್ಗದಲ್ಲಿ ಯಾವುದೇ ನಾಮಫಲಕ ಸೇರಿದಂತೆ ಅಂಗಡಿ ಸರಕುಗಳನ್ನು ಇಡದೇ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಅಂಗಡಿ ಮಾಲೀಕರು ಸೇರಿದಂತೆ ಸಾರ್ವಜನಿಕರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರೆದರೆ ದಂಡ ವಿಧಿಸುವ ಜೊತೆಗೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ನಗರಸಭೆ ಆರೋಗ್ಯ ನಿರೀಕ್ಷಕರಾದ ಮುಕ್ತಾಂಭ, ರಾಜೇಶ್, ಮುರುಳಿ, ಆರ್‌ಐ ನಾಗರಾಜ್, ಸೇರಿದಂತೆ ನಗರಸಭೆ ಸಿಬ್ಬಂದಿ ಪಾಲ್ಗೊಂಡಿದ್ದರು.