ನಗರದ ಪಶುವೈದ್ಯ ಆಸ್ಪತ್ರೆಯಲ್ಲಿ ಮಂಗಳವಾರ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಆಯೋಜಿಸಿದ್ದ ಎರಡನೇ ಸುತ್ತಿನ ಕಾಲುಬಾಯಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ವಿ.ಮುನಿಯಪ್ಪ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಕಾಲುಬಾಯಿ ರೋಗ ಲಕ್ಷಣಗಳುಳ್ಳ ರಾಸುಗಳನ್ನು ಗುರ್ತಿಸಲಾಗಿದ್ದು, ಲಸಿಕೆ ಮೂಲಕ ರೋಗ ನಿಯಂತ್ರಣ ಮಾಡಬೇಕಾಗಿದೆ. ಕೋವಿಡ್ ಮಾದರಿಯಲ್ಲೆ ರಾಸುಗಳಿಗೆ ನಿಗದಿತ ಅವಧಿಯ ಒಳಗೆ ಲಸಿಕಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಬೇಕು. ಸೌಲಭ್ಯವನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು. ಕಾಲುಬಾಯಿ ರೋಗವನ್ನು ನಿಯಂತ್ರಣಕ್ಕೆ ತರುವ ಜೊತೆಗೆ ಹೈನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿದೆ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ಮಾತನಾಡಿ ಕಾಲುಬಾಯಿ ಜ್ವರ ಪ್ರತಿ ವರ್ಷ ಕಾಡುತ್ತಿದೆ. ರೈತರು ರಾಸುಗಳಿಗೆ ವಿಮೆ ಮಾಡಿಸಿಕೊಳ್ಳಬೇಕು. ತಾಲ್ಲೂಕಿನ ಮಳಮಾಚನಹಳ್ಳಿಯಲ್ಲಿ 2013-14 ರಲ್ಲಿ ಕಾಲುಬಾಯಿ ರೋಗಕ್ಕೆ ಸಾಕಷ್ಟು ರಾಸುಗಳು ಮೃತಪಟ್ಟಿದ್ದವು. ಲಸಿಕೆ ಹಾಕಿಸುವುದು ಹೊರತು ಪಡಿಸಿದರೆ ಬೇರೆ ಮಾರ್ಗವಿಲ್ಲ. ರೈತರಲ್ಲಿ ನಿರ್ಲಕ್ಷ್ಯ ಭಾವನೆ ಇರಬಾರದು. ಒಕ್ಕೂಟದಲ್ಲಿ 1 ಲಕ್ಷಕ್ಕೂ ಹೆಚ್ಚು ರಾಸುಗಳು ನೋಂದಣಿಯಾಗಿವೆ. ವಿಮೆಗಿಂತ ಮುಖ್ಯವಾಗಿ ಲಸಿಕೆ ಹಾಕಿಸುವ ಕೆಲಸ ಮಾಡಬೇಕು. ಜಾನುವಾರುಗಳಿಗೆ ಬರುವ ಕಾಯಿಲೆಗಳನ್ನೂ ನಿಯಂತ್ರಣ ಮಾಡಬೇಕಾಗಿದೆ ಎಂದರು.
ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಮೇಶ್, ಜಂಟಿ ನಿರ್ದೇಶಕ ಡಾ.ವೆಂಕಟೇಶ್‌ಮೂರ್ತಿ, ವೈದ್ಯರಾದ ಡಾ.ಕೆಂಪರಾಜು ಡಾ.ಶಂಕರರೆಡ್ಡಿ ಹಾಜರಿದ್ದರು.