ನಗರದ ರೈತ ಸಂಘದ ಕಚೇರಿಯಲ್ಲಿ ಗುರುವಾರ ಅವರು ಮಾತನಾಡಿ, ಹೆಚ್ಚಿನ ಬೆಲೆಗೆ ರಸಗೊಬ್ಬರವನ್ನು ಮಾರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಒತ್ತಾಯಿಸಿದರು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಅವರು ರಸಗೊಬ್ಬರ ಬೆಲೆ ಏರಿಕೆ ಮಾಡುವುದಿಲ್ಲ. ಹಳೆದಾಸ್ತಾನು ಮುಗಿಯುವ ತನಕ ಹಳೆ ದರವೇ ಇರಲಿದ್ದು ರೈತರು ಇದರ ಉಪಯೋಗ ಪಡೆಯಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ. 50 ಕೆಜಿ ಡಿಎಪಿ ಮೂಟೆಯೊಂದಕ್ಕೆ 1200 ರೂಗೆ (ಹಳೆ ದರ) ಮಾರಾಟಮಾಡಬೇಕು. ಅದೇ ರೀತಿ ‘ಎನ್ಪಿಕೆ-10-26-26’ ನಮೂನೆ ರಸಗೊಬ್ಬರ ಮೂಟೆಗೆ 1175 ರೂ, ‘ಎನ್ಪಿಕೆ-12-32-16’ಗೆ 1185 ರೂ, ‘ಎನ್ಪಿ-20-20.0.13’ಗೆ 925 ರೂ ಹಾಗೂ 15:15:15 ನಮೂನೆ ರಸಗೊಬ್ಬರಕ್ಕೆ 1025 ರೂ ಬೆಲೆಯಲ್ಲಿ ಮಾರಾಟ ಮಾಡಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರೇ ತಿಳಿಸಿದ್ದಾರೆ. ಅದರೂ ಅವರ ಆದೇಶವನ್ನು ಉಲ್ಲಂಘಿಸಿ, ಜಿಲ್ಲೆಯಾದ್ಯಂತ ರಸಗೊಬ್ಬರದ ಅಂಗಡಿಗಳವರು ಹೆಚ್ಚಿನ ಬೆಲೆಗೆ ರಸಗೊಬ್ಬರವನ್ನು ಮಾರುತ್ತಿದ್ದಾರೆ . ರೈತರಿಗೆ ಸಮರ್ಪಕವಾಗಿ ಬಿಲ್ ಸಹ ನೀಡದೇ ಚೀಟಿಯೊಂದರಲ್ಲಿ ಬರೆದು ಕೊಡುವ ಮೂಲಕ ಅಂಗಡಿಗಳವರು ಮೋಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಜಿಲ್ಲಾಡಳಿತ ರೈತ ಪರವಾಗಿ ಕೆಲಸ ಮಾಡಬೇಕು. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಿ ಮೋಸ ಮಾಡುತ್ತಿರುವ ಅಂಗಡಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ರೈತರು ಸಹ ರಸಗೊಬ್ಬರದ ನೈಜ ಬೆಲೆಯನ್ನು ತಿಳಿದುಕೊಳ್ಳಬೇಕು. ಅಂಗಡಿಗಳವರು ಹೆಚ್ಚಿನ ದರ ಕೇಳಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ರೈತ ಸಂಘದವರಿಗೆ ತಿಳಿಸಿ ಎಂದು ಹೇಳಿದರು.
ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ವೇಣು, ಮುನಿನಂಜಪ್ಪ, ನಾರಾಯಣಸ್ವಾಮಿ, ಮಂಜುನಾಥ್, ಬಸವರಾಜ್, ಮೂರ್ತಿ, ಸೊಣ್ಣೇನಹಳ್ಳಿ ಕೆಂಪರೆಡ್ಡಿ, ಗುಡಿಹಳ್ಳಿ ಮೂರ್ತಿ, ತಮ್ಮಣ್ಣ ಹಾಜರಿದ್ದರು.