Home News ಪ್ರತಿಭಟನಾ ಮೆರವಣಿಗೆಯ ಭಿತ್ತಿಪತ್ರ ಅನಾವರಣ

ಪ್ರತಿಭಟನಾ ಮೆರವಣಿಗೆಯ ಭಿತ್ತಿಪತ್ರ ಅನಾವರಣ

0

ಬಿ.ಜೆ.ಪಿ ಸರ್ಕಾರದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸ್ವಾವಲಂಬನೆ ವಿರೋಧಿ ಸುಗ್ರೀವಾಜ್ಞೆಗಳನ್ನು ಹಿಂಪಡೆಯಲು ಆಗ್ರಹಿಸಿ ರೈತ, ದಲಿತ, ಕಾರ್ಮಿಕರ ಹಾಗೂ ಜನಸಾಮಾನ್ಯರ ಹಿತಾಸಕ್ತಿ ರಕ್ಷಣೆಗಾಗಿ ಸೆಪ್ಟೆಂಬರ್ 21 ರ ಸೋಮವಾರ ಬೆಂಗಳೂರಿನಲ್ಲಿ ಬೃಹತ್ ರ‍್ಯಾಲಿ ಮತ್ತು ಚಳುವಳಿಗಳ ಪರ್ಯಾಯ ಜನತಾ ಅಧಿವೇಶನ ಹಾಗೂ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರೈತ ಸಂಘ (ಕೆ.ಎಸ್.ಪುಟ್ಟಣ್ಣಯ್ಯ ಬಣ)ದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ತಿಳಿಸಿದರು.

 ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ರೈತ ಸಂಘ (ಕೆ.ಎಸ್.ಪುಟ್ಟಣ್ಣಯ್ಯ ಬಣ)ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

 ಜನಸಮುದಾಯ ಹಲವಾರು ಗಂಭೀರ ಸಮಸ್ಯೆಗಳಿಂದ ಬಳಲುತ್ತಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಪ್ರಜಾಸತ್ತಾತ್ಮಕವಾಗಿ ಸಂವಿಧಾನ ವಿರೋಧಿ ಸುಗ್ರೀವಾಜ್ಞೆಗಳನ್ನು ಜಾರಿಗೆ ತರುತ್ತಿವೆ. ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಒಪ್ಪಿಸಿ ರೈತರನ್ನು ಭಿಕ್ಷುಕರನ್ನಾಗಿ ಮಾಡಲು ಹೊರಟಿದೆ. ಈ ಎಲ್ಲಾ ಜನವಿರೋಧಿ ನೀತಿಗಳನ್ನು ವಿರೋಧಿಸಿ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಟು ಫ್ರೀಡಂ ಪಾರ್ಕಿನಲ್ಲಿ ಅಧಿವೇಶನ ನಡೆಸುವುದಾಗಿ ಹೇಳಿದರು.

  ರೈತ ಸಂಘ (ಕೆ.ಎಸ್.ಪುಟ್ಟಣ್ಣಯ್ಯ ಬಣ)ದ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ತಾಲ್ಲೂಕು ಉಪಾಧ್ಯಕ್ಷ ಶ್ರೀಧರ್, ಮನೋಜ್, ರಮೇಶ, ವೀರಪ್ಪ, ಸೋಮಶೇಖರ, ಲೋಕೇಶ ಹಾಜರಿದ್ದರು