ಕೃಷಿ ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ರೈತರ ಪರ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಭಾರತ್ ಬಂದ್ ಗೆ ತಾಲ್ಲೂಕಿನ ಎಲ್ಲಾ ರೈತ ಸಂಘಟನೆಗಳು ಬೆಂಬಲಿಸಿವೆ.
ರೈತ ಸಂಘದ ಸದಸ್ಯರು ಪೂರ್ವಭಾವಿ ಸಭೆ ನಡೆಸಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಭಾರತ್ ಬಂದ್ ಗೆ ಕರೆ ನೀಡಿದ್ದು ಎಲ್ಲಾ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಿವೆ ಎಂದು ತಿಳಿಸಿದ್ದಾರೆ.
ರೈತರನ್ನು ದೆಹಲಿಯ ಗಡಿಭಾಗದಲ್ಲಿ ತಡೆಯುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಇದನ್ನು ಖಂಡಿಸಿ ಭಾರತ್ ಬಂದ್ಗೆ ರೈತರು ಬೆಂಬಲ ನೀಡುವುದಾಗಿ ರೈತ ಮುಖಂಡರು ಹೇಳಿದ್ದಾರೆ. ಸಾಮಾನ್ಯ ಜನರ ಕಲ್ಯಾಣಕ್ಕೆ ಒತ್ತು ನೀಡುವ ಬದಲು ಸರ್ಕಾರ ಕಾರ್ಪೊರೇಟ್‌ಗಳ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ. ಪ್ರತಿಭಟನೆಯ ಹೊರತಾಗಿಯೂ, ಅವರು ರೈತರ ಬೇಡಿಕೆಗಳಿಗೆ ಮಣಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿದಿನ ನೀವು ತಿನ್ನುವ ಆಹಾರವನ್ನು ಬೆಳೆಯುವವರ ಉದ್ದೇಶಕ್ಕಾಗಿ ಎಲ್ಲರೂ ಹೋರಾಡಬೇಕೆಂದು ನಾವು ವಿನಂತಿಸುತ್ತೇವೆ. ಹೊಸ ಕೃಷಿ ಕಾನೂನುಗಳನ್ನು ಜಾರಿಗೊಳಿಸುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಪ್ರತಿಭಟನೆಗೆ ಸಾರ್ವಜನಿಕರಿಂದ ಬೆಂಬಲ ದೊರೆಯಲಿದೆ. ಕಳೆದ ಹಲವು ದಿನಗಳಿಂದ ರೈತರು (ದೆಹಲಿ) ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ನಾವು ಕೂಡ ಬೆಂಬಲ ಸೂಚಿಸಿದ್ದೇವೆ ಎಂದು ಹೇಳಿದರು.
ಟಿಪ್ಪು ಸೆಕ್ಯುಲರ್ ಸಂಘ, ಕರ್ನಾಟಕ ಜನಪರ ವೇದಿಕೆ, ಕಟ್ಟಡ ಕೂಲಿ ಕಾರ್ಮಿಕರ ಸಂಘ, ಬಿಸಿಯೂಟ ನೌಕರರ ಸಂಘ ಮತ್ತಿತರ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ.