Sidlaghatta : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಸಮಿತಿ ವತಿಯಿಂದ ಸೋಮವಾರ ಶಿಡ್ಲಘಟ್ಟ ತಾಲ್ಲೂಕನ್ನು ಪಿ ನಂಬರ್ ತೆಗೆದು ಪೋಡಿಮುಕ್ತ ತಾಲ್ಲೂಕನ್ನಾಗಿ ಮಾಡಲು ಮತ್ತು ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ತೊಲಗಿಸುವಂತೆ ಒತ್ತಾಯಿಸಿ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಾಲ್ಲೂಕು ಕಚೇರಿ ಮುಂದೆ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಿದರು.
ರೈತರ ಭೂಮಿಯಲ್ಲಿನ ಪಿ ನಂಬರ್ ತೆಗೆದುಹಾಕಿ ಪೋಡಿ ಮುಕ್ತ ಮಾಡಲು ರಾಜ್ಯಾದ್ಯಂತ ಕೆಲವು ತಾಲ್ಲೂಕುಗಳಲ್ಲಿ ಮಾತ್ರ ಈ ಕೆಲಸಗಳು ನಡೆಯುತ್ತಿವೆ. ನಮ್ಮ ತಾಲ್ಲೂಕಿನ ಸರ್ಕಾರಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಕಂದಾಯ ಇಲಾಖೆಯಲ್ಲಿನ ಪಿ ನಂ. 1-5 ತೆಗೆದು ದರಖಾಸ್ತು ಜಮೀನುಗಳನ್ನು ದುರಸ್ತಿ ಮಾಡದೇ ಇರುವದು ಮತ್ತು ಮನೆಗಳ ಇ-ಸ್ವತ್ತು ಮಾಡದೇ ಇರುವುದು, ಅಕ್ರಮ ಸಕ್ರಮದ ಹಕ್ಕುಪತ್ರಗಳನ್ನು ಕೊಡದೇ ಇರುವುದು, ಫಾರಂ 50-53 ಅರ್ಜಿಗಳು ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ದರಖಾಸ್ತು ಕಮಿಟಿಯಿಂದ ಸಾಗುವಳಿ ಚೀಟಿಗಳನ್ನು ಕೊಡದೇ ಇರುವದು, ಧರಖಾಸ್ತು ಜಮೀನುಗಳಿಗೆ ಅರಣ್ಯ ಇಲಾಖೆಯಿಂದ NOC ಕೊಡದೇ ಇರುವುದು, ದರಖಾಸ್ತು ಭೂಮಿಗೆ ನಗರದ ಸುತ್ತಲೂ ಇರುವ 5 ಕಿ.ಮೀ ವ್ಯಾಪ್ತಿಯ ನಿರ್ಭಂದನೆಯನ್ನು ತೆಗೆಯುವುದು, ತಾಲ್ಲೂಕು ಕಚೇರಿಯಲ್ಲಿ RTC ಪಷನ ಚೀಟಿಯನ್ನು ವಿಕಿ 25 ರೂ.ಗಳಿಗೆ ಏರಿಸಿರುವರು, ಸರ್ವೆ ಆಫೀಸಿನಲ್ಲಿ 11 ಇ ಸ್ಕೆಚ್, ಹದ್ದುಬಸ್ತು ಅಳತೆ ಮುಂತಾದವುಗಳ ಬೆಲೆ ಏರಿಸಿರುವುದು, ಸಬ್ ರಿಜಿಸ್ಟ್ರಾರ್ ರವರ ಕಚೇರಿಯಲ್ಲಿ EC, ಕ್ರಯ ಮತ್ತು ಸಿಂಪಲ್ ಮಾರ್ಟ್ ಗೇಜಿನ ಬೆಲೆ ಏರಿಸಿರುವುದು, ತಾಲ್ಲೂಕು ಕಚೇರಿಯಲ್ಲಿ ಕೆಲವು ಸರ್ಕಾರಿ ನೌಕರರಿಗೆ ಕಾನೂನಿನ ಸಾಮಾನ್ಯ ಅರಿವೂ ಇಲ್ಲದೆ ರೈತರನ್ನು ವೃಥಾ ಅಲೆದಾಡಿಸುತ್ತಿರುವುದು, ತಾಲ್ಲೂಕಿನಾದ್ಯಂತ ನಕಾಶೆ ರಸ್ತೆಗಳು, ವಾಡಿಕೆ ರಸ್ತೆಗಳು ಮತ್ತು ರಾಜಕಾಲುವೆಗಳನ್ನು ತೆರವುಗೊಳಿಸದೇ ಇರುವುದು, ಇವೆಲ್ಲವುಗಳನ್ನು ಖಂಡಿಸಿ ವಿವಿಧ ಬೇಡಿಕೆ ಈಡೇರಿಸಲು ರೈತ ಸಂಘದ ವತಿಯಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಬಿ.ನಾರಾಯಣಸ್ವಾಮಿ, ವೇಣು ಹಾಜರಿದ್ದರು.