Jangamakote, Sidlaghatta : ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿಯಿಂದ ಜಮೀನು ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ರೈತರನ್ನು ದಿಕ್ಕುತಪ್ಪಿಸುವ ಮತ್ತು ರೈತರಲ್ಲೆ ಗೊಂದಲ ಮೂಡಿಸುವ ಕೆಲಸವನ್ನು ಬಿಡಬೇಕೆಂದು ಯುವ ರೈತ ನಡಿಪಿನಾಯಕನಹಳ್ಳಿಯ ಅಜಿತ್ ಕುಮಾರ್ ಆಗ್ರಹಿಸಿದರು.
ನಡಿಪಿನಾಯಕನಹಳ್ಳಿ ಗೇಟ್ ನಲ್ಲಿ ನಡಿಪಿನಾಯಕನಹಳ್ಳಿ ಹಾಗೂ ಸುತ್ತ ಮುತ್ತಲ ರೈತರೊಂದಿಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನು ಶನಿವಾರ ಮಧ್ಯಾಹ್ನ ಭೇಟಿ ಮಾಡಿ ಫಲವತ್ತಾದ ಜಮೀನನ್ನು ಕೆಐಎಡಿಬಿಯ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವಂತೆ ಮನವಿ ಮಾಡಿದ್ದೆವ.
ಆಗ ಅವರು ಹತ್ತು ದಿನಗಳೊಳಗೆ ಜಂಗಮಕೋಟೆ ಕ್ರಾಸ್ ನಲ್ಲೆ ರೈತರ ಸಭೆ ನಡೆಸುತ್ತೇನೆ. ಪಹಣಿ ಇರುವ ಹಕ್ಕುದಾರ ರೈತರನ್ನು ಮಾತ್ರ ಸಭೆ ಸೇರಿಸುತ್ತೇನೆ. ಸ್ಥಳೀಯ ಶಾಸಕ ಬಿ.ಎನ್.ರವಿಕುಮಾರ್ ಅವರನ್ನು ಸಹ ಮಾತನಾಡಿ ಸಭೆಗೆ ಕರೆತರುತ್ತೇನೆ ಎಂದರು.
ಸಭೆಯಲ್ಲಿ ಶೇ 75ರಷ್ಟು ರೈತರು ಕೆಐಎಡಿಬಿಗೆ ಜಮೀನು ಬಿಟ್ಟುಕೊಡಲು ಒಪ್ಪಿದರೆ ಮಾತ್ರ ಅಲ್ಲಿ ಕೈಗಾರಿಕಾ ಕಾರಿಡಾರ್ ಮಾಡುತ್ತೇವೆ. ಒಂದು ವೇಳೆ ಶೇ 75ರಷ್ಟು ರೈತರು ಜಮೀನು ಬಿಟ್ಟುಕೊಡಲು ಒಪ್ಪದಿದ್ದಲ್ಲಿ ರೈತರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಕೈಗಾರಿಕಾ ಕಾರಿಡಾರ್ ಯತ್ನವನ್ನು ಕೈ ಬಿಡುತ್ತೇವೆ ಎಂದು ನಮಗೆ ಭರವಸೆ ನೀಡಿದ್ದರು.
ಆದರೆ ರಾತ್ರಿಯೆ ಅವರು ತಮ್ಮ ಅಧಿಕೃತ ಜಾಲತಾಣದಲ್ಲಿ ಸರ್ಕಾರದ ಯೋಜನೆ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ಉದ್ಯೋಗಗಳು ದೊರೆತು ಅನುಕೂಲ ಆಗುವ ಬಗ್ಗೆ ವಿವರಿಸಿ ರೈತರ ಮನವೊಲಿಸಿದ್ದೇನೆ ಎಂಬರ್ಥದಲ್ಲಿ ಹೇಳಿದ್ದಾರೆ.
ಇದರಿಂದ ರೈತರಲ್ಲಿ ಗೊಂದಲ ಮೂಡುತ್ತದೆಯಲ್ಲದೆ ಇತರೆ ರೈತರಲ್ಲಿ ಗೊಂದಲ ಉಂಟಾಗುತ್ತದೆ. ಆದ್ದರಿಂದ ಸಚಿವರು ನಮಗೆ ಭರವಸೆ ಕೊಟ್ಟಂತೆ ಶೀಘ್ರದಲ್ಲೆ ರೈತರ ಸಭೆ ಕರೆಯಬೇಕು, ಸ್ಥಳೀಯ ಶಾಸಕರನ್ನು ಕರೆತರಬೇಕು, ಪಹಣಿ ಇರುವ ಖಾತೆದಾರ ರೈತರ ಒಪ್ಪಿಗೆ ಅಭಿಪ್ರಾಯ ಸಂಗ್ರಹಿಸಬೇಕು.
ಶೇ 75ಕ್ಕಿಂತಲೂ ಹೆಚ್ಚು ರೈತರು ಕೆಐಎಡಿಬಿಗೆ ಜಮೀನು ಬಿಟ್ಟುಕೊಡಲು ಒಪ್ಪಿದರೆ ಮಾತ್ರ ಕೈಗಾರಿಕೆ ಸ್ಥಾಪನೆಯ ಪ್ರಕ್ರಿಯೆ ಮುಂದುವರೆಸಿ ಇಲ್ಲವಾದಲ್ಲಿ ಆ ಪ್ರಕ್ರಿಯೆಯನ್ನು ಕೈಬಿಡಿ ಎಂದು ಒತ್ತಾಯಿಸಿದರು.
ನಮ್ಮದು ಒಂದೆ ವಾದ, ಕೈಗಾರಿಕೆಗಳ ಸ್ಥಾಪನೆಗೆ ನಮ್ಮ ವಿರೋಧವಿಲ್ಲ. ಇಲ್ಲಿ ಫಲವತ್ತಾದ ಜಮೀನು ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ಈ ಜಾಗ ಬೇಡ, ಬದಲಿಗೆ ಫಲವತ್ತತೆ ಇರದ ಜಾಗ ಸಾಕಷ್ಟು ಇರುವ ಕಡೆ ಕೈಗಾರಿಕೆ ಸ್ಥಾಪನೆ ಮಾಡಿ. ಯಾವುದೆ ಕಾರಣಕ್ಕೂ ನಮ್ಮ ಈ ಫಲವತ್ತಾದ ಜಮೀನನ್ನು ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ ಎಂದು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.
ಅದು ಬಿಟ್ಟು ನಾವು ಮಂತ್ರಿಗಳನ್ನು ಭೇಟಿ ಮಾಡಿ ನಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಅವರು ಹೇಳುವುದೊಂದು, ಕೊಡುವ ಭರವಸೆ ಒಂದು, ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಮೀಡಿಯಾಗಳಿಗೆ ಹೇಳಿಕೆ ನೀಡುವುದೆ ಇನ್ನೊಂದು ರೀತಿಯಲ್ಲಿ ಆಗಬಾರದು ಎಂದು ಒತ್ತಾಯಿಸಿದರು.
ರೈತರಾದ ಹೀರೆಬಲ್ಲ ಕೃಷ್ಣಪ್ಪ, ನಡಿಪಿನಾಯಕನಹಳ್ಳಿ ಅಶ್ವತ್ಥಪ್ಪ, ನಾರಾಯಣಸ್ವಾಮಿ, ಯಣ್ಣಂಗೂರು ಅಶ್ವತ್ಥಗೌಡ, ತೊಟ್ಲಗಾನಹಳ್ಳಿ ಕೃಷ್ಣಪ್ಪ, ತಾದೂರು ರಮೇಶ್, ಬಸವಾಪಟ್ಟಣ ಕೃಷ್ಣಪ್ಪ ಇನ್ನಿತರೆ ರೈತರು ಹಾಜರಿದ್ದರು.