ರೈತರಿಗೆ ಹಾಗೂ ನೌಕರರಿಗೆ ಮಾರಕವಾಗುವ ವಿದ್ಯುತ್ ಖಾಸಗೀಕರಣ ಮತ್ತು ರೈತರ ಪಂಪ್ ಸೆಟ್ ಗಳಿಗೆ ಪ್ರೀಪೈಡ್ ಮೀಟರ್ ಅಳವಡಿಸುವ 2003 ರ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡಬಾರದೆಂದು ಪ್ರಧಾನಮಂತ್ರಿಗಳಿಗೆ ಶಿರಸ್ತೆದಾರ್ ಮಂಜುನಾಥ್ ಮೂಲಕ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘದ ಸದಸ್ಯರು ಬುಧವಾರ ಮನವಿಯನ್ನು ಸಲ್ಲಿಸಿದರು.
ದೇಶದಲ್ಲಿ ಶೇ 60 ರಷ್ಟು ಕೃಷಿಕ್ಷೇತ್ರವನ್ನು ಅವಲಂಬಿಸಿರುವ ಕೋಟ್ಯಂತರ ರೈತರಿಗೆ ವಿದ್ಯುತ್ ಖಾಸಗೀಕರಣ ಮಸೂದೆ ಮಾರಕವಾಗಲಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ವಿರೋಧಿ ನೀತಿಗಳಿಂದ ಕೃಷಿಯನ್ನು ನಂಬಿರುವ ರೈತರು ದಿನೇದಿನೇ ಕೃಷಿಯಿಂದ ವಿಮುಕ್ತಿ ಹೊಂದುತ್ತಿದ್ದಾರೆ. ಲಕ್ಷಾಂತರ ರೂ ಬಂಡವಾಳ ಹಾಕಿ ಬೆಳೆದಂತ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆ ಸಿಗದೇ ರಸ್ತೆಗೆ ಸುರಿಯುವ ಪರಿಸ್ಥಿತಿಯಿದೆ. ಅತಿವೃಷ್ಟಿ, ಅನಾವೃಷ್ಟಿ ಹಾಗೂ ಸಂಕ್ರಾಮಿಕ ರೋಗಗಳಿಗೆ ರೈತರ ಬೆಳೆಗಳು ನಾಶವಾಗುತ್ತಿವೆ. ನಷ್ಟದ ನಡುವೆಯೇ ಕೃಷಿಯನ್ನೇ ಅವಲಂಬಿತರಾದ ರೈತರಿಗೆ ಇದೀಗ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪಂಪ್ ಸೆಟ್ ಗಳಿಗೆ ಪ್ರೀಪೈಡ್ ಮೀಟರ್ ಅಳವಡಿಸುವ ಮಸೂದೆಯು ಕೃಷಿ ಕ್ಷೇತ್ರದ ಮರಣ ಶಾಸನವಾಗಲಿದೆ. ವಿದ್ಯುತ್ ಖಾಸಗೀಕರಣವಾದರೆ ಬಡ ರೈತರು, ಕೂಲಿ ಕಾರ್ಮಿಕರಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಕೃಷಿ ಪಂಪ್ ಸೆಟ್, ಬೀದಿ ದೀಪ, ನೀರು ಸರಬರಾಜಿಗೆ ನೀಡುತ್ತಿರುವ ಉಚಿತ ವಿದ್ಯುತ್ ನಿಲ್ಲಲಿದೆ. ಇದರಿಂದ ಖಾಸಗಿಯವರ ಕೈಗೆ ರೈತರ ಜುಟ್ಟು ಕೊಟ್ಟಂತಾಗುತ್ತದೆ. ರೈತರ ಮೇಲೆ ಸರ್ಕಾರ ಗದಾ ಪ್ರಹಾರಕ್ಕೆ ಮುಂದಾಗಿರುವುದು ಸರಿಯಲ್ಲ. ಕೃಷಿ ಕ್ಷೇತ್ರವನ್ನು ನಾಶ ಮಾಡಿ, ಬಂಡವಾಳ ಶಾಹಿಗಳ ಕೈಗೆ ಸಂಪೂರ್ಣವಾಗಿ ನೀಡಿ, ಆಹಾರ ಕೊರತೆಯನ್ನು ಸೃಷ್ಟಿಸಿ, ತುತ್ತು ಅನ್ನಕ್ಕಾಗಿ ಹೊರದೇಶದ ಬಳಿ ಕೈ ಚಾಚುವ ಸ್ಥಿತಿ ಉಂಟಾಗಲಿದೆ ಎಂದು ಆರೋಪಿಸಿದ್ದಾರೆ.
ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ, ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ನಾಗೇಶ, ಮಂಜುನಾಥ್, ನಾರಾಯಣಸ್ವಾಮಿ, ಗೋಪಾಲಕೃಷ್ಣ, ನವೀನ್, ಬೈರೇಗೌಡ, ಮುನಿರಾಜು ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi