ನಗರದ ಸ್ತ್ರೀಶಕ್ತಿ ಭವನದಲ್ಲಿ ಬುಧವಾರ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮ), ಕೃಷಿ ಇಲಾಖೆ ಮತ್ತು ತಾಲ್ಲೂಕು ಕೃಷಿಕ ಸಮಾಜದ ಸಹಯೋಗದಲ್ಲಿ ನಡೆದ ರೈತ ದಿನಾಚರಣೆ ಮತ್ತು ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಸಿಂಧು ಮಾತನಾಡಿದರು.
ಸಾವಯವ ಕೃಷಿ ಪದ್ಧತಿ ಮತ್ತು ಮಿಶ್ರ ಬೆಳೆ ಬೇಸಾಯ ಕ್ರಮದಿಂದ ರೈತರ ಬದುಕು ಹಸನವಾಗಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ರೈತರು ಬದಲಾಗಬೇಕು. ಕೃಷಿಯಲ್ಲಿ ಯಂತ್ರೋಪಕರಣ ಬಳಕೆ, ಸಾವಯವ ಕೃಷಿ ಪದ್ಧತಿ, ಒಂದೇ ಬೆಳೆಯನ್ನು ಅವಲಂಬಿಸದೆ ಮಿಶ್ರ ಬೆಳೆ ಕ್ರಮವನ್ನು ಅನುಸರಿಸಿದರೆ ಲಾಭವಾಗುತ್ತದೆ. ಏಕ ಬೆಳೆ ಪದ್ಧತಿಯ ಬೇಸಾಯ ಕೃಷಿಕರ ಪಾಲಿಗೆ ಮಾರಕ. ಮಿಶ್ರ ಬೆಳೆ ಪದ್ಧತಿ ರೈತರ ರಕ್ಷಕನಿದ್ದಂತೆ. ಅದರಲ್ಲೂ ರಾಸಾಯನಿಕ ಮುಕ್ತ ಕೃಷಿ ಅಳವಡಿಸಿಕೊಂಡರೆ ಎಂದೂ ನಷ್ಟ ಎಂಬ ಮಾತೇ ಬೆಳೆಗಾರರ ಬಾಯಿಂದ ಹೊರ ಬರುವುದಿಲ್ಲ ಎಂದರು.
ಆತ್ಮ ಯೋಜನಾ ನಿರ್ದೇಶಕ ಸತೀಶ್ ಕುಮಾರ್ ಮಾತನಾಡಿ, “ಆತ್ಮ” (ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ)ಯ ಕೃಷಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಅಡಿಯಲ್ಲಿ ಕೃಷಿಯನ್ನು ಆಧುನೀಕರಿಸಲು ರೈತರಿಗೆ ತರಬೇತಿ ನೀಡುತ್ತಿದೆ. ಇದರ ಅಡಿಯಲ್ಲಿ ರೈತರಿಗೆ ತರಬೇತಿ, ಪ್ರದರ್ಶನ, ಅಧ್ಯಯನ, ಭೇಟಿ, ಕೃಷಿ ಮೇಳಗಳು, ರೈತರ ಗುಂಪುಗಳನ್ನು ಆಯೋಜಿಸುವುದು ಮತ್ತು ಕೃಷಿ ಶಾಲೆಗಳನ್ನು ನಡೆಸಲಾಗುವುದು. ಕೃಷಿ ವಿಜ್ಞಾನಿಗಳು ಮತ್ತು ರೈತರ ನಡುವೆ ಉತ್ತಮ ಸಮನ್ವಯತೆಯನ್ನು ಸ್ಥಾಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದನ್ನು ಸರಿಯಾಗಿ ಅನುಷ್ಠಾನಗೊಳಿಸುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಬಹುದು. ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡುವುದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ವಿ.ಮಂಜುನಾಥ್, ಕೃಷಿ ಅಧಿಕಾರಿಗಳಾದ ಶ್ರೀನಿವಾಸ್, ಮೋಹನ್ ಕುಮಾರ್, ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಎನ್.ಅಶ್ವತ್ಥನಾರಾಯಣ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಸುಸ್ಮಿತಾ, ಆಶಾರಾಣಿ, ಪ್ರಗತಿಪರ ರೈತರಾದ ಎಚ್.ಜಿ.ಗೋಪಾಲಗೌಡ, ಬೋದಗೂರು ವೆಂಕಟಸ್ವಾಮಿರೆಡ್ಡಿ, ಮುತ್ತೂರು ಕೆಂಪೇಗೌಡ, ಜೆ.ಎಸ್.ವೆಂಕಟಸ್ವಾಮಿ, ತಾದೂರು ಮಂಜುನಾಥ್, ಮುನಿಕೆಂಪಣ್ಣ, ಮಂಜುನಾಥ್, ರವಿಪ್ರಕಾಶ್, ಬೆಳ್ಳೂಟಿ ನಾಗಪ್ಪ ಹಾಜರಿದ್ದರು.