Home News ಮಳೆನೀರು ಹರಿದು ಹೋಗದೆ ಕೊಳೆಯುತ್ತಿರುವ ರೈತರ ಬೆಳೆ

ಮಳೆನೀರು ಹರಿದು ಹೋಗದೆ ಕೊಳೆಯುತ್ತಿರುವ ರೈತರ ಬೆಳೆ

0

ಕಳೆದ ಒಂದು ವಾರದಿಂದ ಬೀಳುತ್ತಿರುವ ಆರ್ದಾ ಮಳೆಗೆ ನಗರದ ಹೊರವಲಯದ ಗೌಡನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 20 ಎಕರೆ ಪ್ರದೇಶವು ಜಲಾವೃತಗೊಂಡಿದೆ. ಈ ಭಾಗದಲ್ಲಿ ಹೆಚ್ಚಾಗಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆದಿದ್ದು, ರೈತರು ಬೆಳೆಯ ನಷ್ಟದಿಂದ ಕಂಗಾಲಾಗಿದ್ದಾರೆ.

 ರೇಷ್ಮೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ರೈತರು ಬೆಳೆದ ಹಿಪ್ಪುನೇರಳೆ ಸೊಪ್ಪು ನಿಂತ ನೀರಿನಲ್ಲಿ ಕೊಳೆಯುತ್ತಿದೆ. ಬಿದ್ದ ಮಳೆ ನೀರು ಹೊರಕ್ಕೆ ಹೋಗದಂತಾಗಿದೆ. ಲಕ್ಷಾಂತರ ರೂಗಳು ನಷ್ಟ ಹೊಂದಿರುವ ರೈತರು, ರಾಜಕಾಲುವೆಗಳ ಒತ್ತುವರಿಯೇ ಈ ಅತಿವೃಷ್ಟಿಗೆ ಕಾರಣ ಎನ್ನುತ್ತಿದ್ದಾರೆ.

 ರಾಜಕಾಲುವೆಗಳನ್ನು ತೆರವುಗೊಳಿಸಿದರೆ ಎಷ್ಟೇ ಮಳೆ ನೀರು ಬಿದ್ದರೂ ಹರಿದು ಹೋಗುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರ ಕಷ್ಟವನ್ನು ಪರಿಹರಿಸಬೇಕು. ಸುಮಾರು ವರ್ಷಗಳಿಂದ ರಾಗಿ, ಜೋಳ, ಅವರೆ, ತೊಗರಿ ಹಾಗೂ ಹೆಚ್ಚಾಗಿ ರೇಷ್ಮೆಯ ಹಿಪ್ಪುನೇರಳೆ  ಸೊಪ್ಪಿನ ಬೆಳೆಗಳನ್ನು ಇಲ್ಲಿ ಬೆಳೆಯುತ್ತಿದ್ದಾರು. ರೈತರಿಗೆ ಆಘಿರುವ ಲಕ್ಷಾಂತರ ರೂಪಾಯಿಗಳಷ್ಟು ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದರು.

 ಒಂದು ಕಡೆ ಕರೋನ, ಇನ್ನೊಂದು ಕಡೆ ವರುಣ. ರೈತರಿಗೆ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗದೆ ಆಗುತ್ತಿರುವ ನಷ್ಟದ ಜೊತೆಗೆ ಅತಿವೃಷ್ಟಿಯ ತೊಂದರೆಗೆ ಸಿಲುಕಿದರೆ ನಾವು ಏನು ಮಾಡಬೇಕು ಎಂದು ತಮ್ಮ ಗೋಳನ್ನು ರೈತರು ಹೇಳಿಕೊಂಡರು.

 ಸಂಬಂಧಪಟ್ಟ ಕಂದಾಯಾಧಿಕಾರಿಗಳು ,ತಹಶೀಲ್ದಾರರು ಕೂಡಲೇ ಗೌಡನ ಕೆರೆ ಅಚ್ಚುಕಟ್ಟಿನ ಜಮೀನುಗಳ ಬಳಿ ಬಂದು ಪರಿವೀಕ್ಷಣೆ ಮಾಡಿ, ರೈತರಿಗೆ ನಷ್ಟ ಪರಿಹಾರ ಒದಗಿಸಬೇಕು. ಹಾಗೂ ಒತ್ತುವರಿ ಆಗಿರುವ ರಾಜಕಾಲುವೆಗಳನ್ನು ತೆರವುಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ರೈತರಾದ ಬಚ್ಚೇಗೌಡ, ಹನುಮಂತಮ್ಮ, ಕೃಷ್ಣಪ್ಪ, ಮುನಿರಾಜು, ಶ್ರೀನಾಥ್, ವೆಂಕಟರಾಯಪ್ಪ, ಪ್ರಕಾಶ್, ಪ್ರಶಾಂತ್, ಭರತ್, ಮೂರ್ತಿ ಹಾಜರಿದ್ದರು.