Melur, Sidlaghatta : ಮಾನವನ ದೇಹದಲ್ಲಿನ ಬಹುಮುಖ್ಯ ಅಂಗವಾಗಿರುವ ಕಣ್ಣಿನ ತಪಾಸಣೆಯನ್ನು ಕಾಲಕಾಲಕ್ಕೆ ಎಲ್ಲರೂ ಮಾಡಿಸಿಕೊಳ್ಳಬೇಕು ಎಂದು ಮೇಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಮೇಶ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ಲೋಬ್ ಐ ಫೌಂಡೇಷನ್ ಬೆಂಗಳೂರು ಮತ್ತು ಹೊಸಕೋಟೆ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಉಚಿತ ಕಣ್ಣಿನ ಪೊರೆ ರೋಗ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರದ ಕೊನೆಯ ದಿನವಾದ ಶುಕ್ರವಾರ ಭಾಗವಹಿಸಿ ಅವರು ಮಾತನಾಡಿದರು.
ದೃಷ್ಠಿದೋಷ, ಕಣ್ಣಿನ ಪೊರೆ, ಕಣ್ಣಿನಲ್ಲಿ ನೀರು ಸೋರುವಿಕೆ, ಅಭ್ಯಾಸದ ಸಮಯದಲ್ಲಿ ದೃಷ್ಠಿ ಮಂದವಾಗುವುದು, ಮುಂತಾದ ಸಮಸ್ಯೆಗಳ ನಿವಾರಣೆಗಾಗಿ ಆಗಾಗ ಕಣ್ಣಿನ ತಪಾಸಣೆಗೆ ಒಳಪಟ್ಟಾಗ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಬಹಳಷ್ಟು ಜನ ದೃಷ್ಟಿ ಕಡಿಮೆಯಾಗಿ, ಪೊರೆಯಿದೆ ಎಂದೂ ತಿಳಿದರೂ ಹತ್ತಾರು ವರ್ಷಗಳಗಟ್ಟಲೇ ಹಾಗೆಯೇ ಇರುತ್ತಾರೆ. ದೃಷ್ಟಿ ಕಡಿಮೆಯಾದ ತಕ್ಷಣವೇ ತಪಾಸಣೆ ನಡೆಸಿದಲ್ಲಿ ದೃಷ್ಟಿಯ ಸಮಸ್ಯೆ ಸರಿಹೋಗುವ ಸಾಧ್ಯತೆ ಇರುತ್ತದೆ. ಸರ್ಕಾರದ ವಿವಿಧ ಸವಲತ್ತುಗಳನ್ನು ಬಳಸಿಕೊಂಡು ಆರೋಗ್ಯದ ಬಗ್ಗೆ ಎಲ್ಲರೂ ಹೆಚ್ಚು ಕಾಳಜಿವಹಿಸಬೇಕು ಎಂದರು.
ಮೇಲೂರು, ಮಳ್ಳೂರು, ಭಕ್ತರಹಳ್ಳಿ, ಕೊಂಡೇನಹಳ್ಳಿ, ಹಂಡಿಗನಾಳ, ಮಳಮಾಚನಹಳ್ಳಿ, ನಾಗಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೮೦೦ ಕ್ಕೂ ಹೆಚ್ಚು ಜನ ತಪಾಸಣೆ ಮಾಡಿಸಿಕೊಂಡಿದ್ದು 23 ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ದೃಷ್ಠಿ ದೋಷ ಇರುವವರಿಗೆ ಸರ್ಕಾರದಿಂದ ಉಚಿತ ಕನ್ನಡಕಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಅವರ ಮನೆಗಳಿಗೆ ತಲುಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ಲೋಬ್ ಐ ಫೌಂಡೇಷನ್‌ನ ವೈದ್ಯೆ ಅರ್ಚನಾ, ನಗರದ ಸಾರ್ವಜನಿಕ ಆಸ್ಪತ್ರೆಯ ಮೀನಾಕ್ಷಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ದೇವರಾಜ್ ಹಾಜರಿದ್ದರು.