ತಾಲ್ಲೂಕಿನ ಕಾಚಹಳ್ಳಿ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ತಾಲ್ಲೂಕು ಕಸಾಪ ವತಿಯಿಂದ ನಡೆದ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವದ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಮರ ವಾಸ್ತು ಶಿಲ್ಪಿ, ಭಾರತದ ಭಾಗ್ಯ ವಿಧಾತ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನಮ್ಮ ಜಿಲ್ಲೆಯಲ್ಲಿ ಜನಿಸಿದ್ದು ನಮ್ಮೆಲ್ಲರ ಭಾಗ್ಯ ಎಂದು ಅವರು ತಿಳಿಸಿದರು.
102 ವರ್ಷಗಳ ತುಂಬು ಬದುಕಿನಲ್ಲಿ ವಿಶ್ವೇಶ್ವರಯ್ಯ ನಾಡಿಗಾಗಿಯೇ ದುಡಿದವರು. ಇಂದು ಕರ್ನಾಟಕ ರಾಜ್ಯ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಾದರೆ ಅದಕ್ಕೆ ವಿಶೇಶ್ವರಯ್ಯ ಅವರ ಕಠಿಣ ಪರಿಶ್ರಮ ಮತ್ತು ದೂರದೃಷ್ಟಿಯೇ ಮುಖ್ಯ ಅಡಿಪಾಯ. ದೂರದೃಷ್ಟಿಯುಳ್ಳ ಗ್ರಾಮೀಣ ಪ್ರಗತಿಯ ಯೋಜನೆಯನ್ನು ಅವರು ರೂಪಿಸಿದ್ದರು. ಮೇಲೂರಿನಿಂದ ಕಂಬದಹಳ್ಳಿಗೆ ಹೋಗುವ ರಸ್ತೆಯಲ್ಲಿ ಗ್ರಾಮೀಣ ಭಾಗದಲ್ಲಿ ಪ್ರಾರಂಭವಾದ ಮೊಟ್ಟಮೊದಲ ಕಾರ್ಖಾನೆ, ಕಿಸಾನ್ ಸಿಲ್ಕ್ ಇಂಡಸ್ಟ್ರಿ ಯನ್ನು 1952ರಲ್ಲಿ ವಿಶ್ವೇಶ್ವರಯ್ಯ ಅವರೇ ಉದ್ಘಾಟನೆ ಮಾಡಿದ್ದರು ಎಂದರು.
ಈ ಸಂದರ್ಭದಲ್ಲಿ ಕಾಚಹಳ್ಳಿ ಗ್ರಾಮದ ಎಂಜಿನಿಯರುಗಳಾದ ಚೇತನ್ ಬಾಬು, ಹೇಮಂತ್ ಮತ್ತು ಅಶೋಕ್ ಕುಮಾರ್ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಕಾಚಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಆರ್.ರಾಜೇಶ್ವರಿ, ಶಿಕ್ಷಕ ವಿ.ಚಂದ್ರಶೇಖರ್, ಗ್ರಾಮಸ್ಥರಾದ ಮುನಿಯಪ್ಪ, ಮುನಿರಾಜಪ್ಪ, ದೇವಿಕ, ಸಂಪಂಗಮ್ಮ, ಗಾಯಿತ್ರಮ್ಮ, ಶಾರದಮ್ಮ, ಭವ್ಯ ಹಾಜರಿದ್ದರು.