Sidlaghatta : ಶಿಡ್ಲಘಟ್ಟ ನಗರಸಭಾ ವ್ಯಾಪ್ತಿಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ 2023 ರ ಮತದಾರರ ಅಂತಿಮ ಪರಿಷ್ಕರಣೆ ಪಟ್ಟಿಯನ್ನು ಅಪರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಆದೇಶದ ಮೇರೆಗೆ ಗುರುವಾರ ಕರಡು ಪ್ರತಿಯನ್ನು ಬಿಡುಗಡೆಗೊಳಿಸಲಾಗಿದೆ. ಮತದಾರರು ಸರಿ ತಪ್ಪು ಮತ್ತು ಸೇರ್ಪಡೆ ಪರಿಶೀಲನೆ ಮಾಡಲು ಅಂತಿಮವಾಗಿ ಗಡುವು ನೀಡಲಾಗಿದೆ ಎಂದು ಪೌರಾಯುಕ್ತ ಶ್ರೀಕಾಂತ್ ತಿಳಿಸಿದರು.
ಮತದಾರರು ಪರಿಷ್ಕರಣೆ ಕಾರ್ಯ ಅಂದರೆ ಸೇರ್ಪಡೆ, ಕೈಬಿಡುವಿಕೆ, ಸ್ಥಳಾಂತರ ಮುಂತಾದವುಗಳ ಬಗ್ಗೆ ಕಳೆದ ನವೆಂಬರ್ 9 ರಿಂದ ಡಿಸೆಂಬರ್ 8 ರವರೆಗೂ ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆವು. ಇದೀಗ ನಗರಸಭೆ ವ್ಯಾಪ್ತಿಯಲ್ಲಿನ 38 ಮತಗಟ್ಟೆಗಳಲ್ಲಿ ಕರಡು ಪ್ರತಿಯನ್ನು ಪ್ರಚುರಪಡಿಸಿದ್ದೇವೆ. ಜನವರಿ 13ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಈಗಾಗಲೇ ಮತಗಟ್ಟೆ ಹಂತದ ಬಿಎಲ್ಓ ಅಧಿಕಾರಿಗಳನ್ನು ನೇಮಿಸಲಾಗಿದೆ. ಮತದಾರರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ದಯವಿಟ್ಟು ತಮ್ಮ ಮತಗಟ್ಟೆಗಳಿಗೆ ಹೋಗಿ ಪರಿಶಿಲಿಸಿ. ಭಾವಚಿತ್ರ, ಹೆಸರು, ಇನಿಶಿಯಲ್ಲು ಮುಂತಾದ ಲೋಪದೋಷಗಳೇನಾದರೂ ಕಂಡುಬಂದಲ್ಲಿ ನಮ್ಮ ಗಮನಕ್ಕೆ ತನ್ನಿ, ಸರಿಪಡಿಸುತ್ತೇವೆ. 18 ವರ್ಷ ತುಂಬಿದವರು, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು, ತಿದ್ದುಪಡಿ ಮತ್ತು ಹೆಸರು ತೆಗೆಯುವ ಬಗ್ಗೆ ಅರ್ಜಿ ನೀಡಬಹುದು ಎಂದು ಹೇಳಿದರು.
ಮತದಾರರು ಪರಿಷ್ಕರಣೆ ಅವಧಿಯಲ್ಲಿ ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ, ಇದ್ದಲ್ಲಿ ತಂದೆ, ತಾಯಿ, ಗಂಡನ ಹೆಸರು, ವಯಸ್ಸು, ಲಿಂಗ ಮತ್ತಿತರ ವಿವರಗಳ ಬಗ್ಗೆ ಪರಿಶೀಲಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. 18 ವರ್ಷ ಪೂರ್ಣಗೊಳ್ಳುವವರು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡದೆ ಇರುವವರು ನಮೂನೆ 6ರಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ಇತರೆ ಪ್ರದೇಶಗಳಲ್ಲಿ ನೋಂದಣಿ ಆಗಿರುವವರು ಹಿಂದಿನ ವಾಸ ಸ್ಥಳದ ಬಗ್ಗೆ ನಮೂನೆ 6ರ ಜತೆ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ವಯಸ್ಸಿನ ಹಾಗೂ ವಾಸ ಸ್ಥಳದ ದಾಖಲೆಪತ್ರ ನೀಡಬೇಕು ಎಂದು ಸೂಚಿಸಿದರು.
ಮತದಾರರ ಪಟ್ಟಿಯಲ್ಲಿನ ವಿವರ ತಪ್ಪಿದ್ದರೆ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಮತ ಪ್ರದೇಶದ ವರ್ಗಾವಣೆ ಬಯಸುವವರು ನಮೂನೆ 8ಎರಲ್ಲಿ ಅರ್ಜಿ ಸಲ್ಲಿಸಿ ವರ್ಗಾವಣೆ ಅವಕಾಶ ಪಡೆಯಬಹುದು. ಆದರೆ, 2 ಕಡೆ ಗುರುತಿನ ಚೀಟಿ ಹೊಂದಿದ್ದರೆ ಶಿಕ್ಷಾರ್ಹ ಅಪರಾಧ ಎಂದು ಹೇಳಿದರು.