Taladummanahalli, Sidlaghatta : ಚುನಾವಣಾ ಸ್ಕ್ವಾಡ್ ಸಿಬ್ಬಂದಿ ಎಂದು ಹೇಳಿಕೊಂಡು ಬೈಕ್ ಸವಾರರನ್ನು ಅಡ್ಡ ಗಟ್ಟಿ ಬಲವಂತವಾಗಿ ಹಣ ಕಿತ್ತುಕೊಂಡು ಪರಾರಿಯಾಗಿದ್ದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲ್ಲೂಕಿನ ತಲದುಮ್ಮನಹಳ್ಳಿ ವಾಸಿ ಚೊಕ್ಕಪ್ಪನ ಮಗ ಮಂಜುನಾಥ್(40) ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು ಬೆಳ್ಳೂಟಿ ಗ್ರಾಮದ ಮೋಹನ್, ವೇಣು, ಅರುಣ್, ಮಿಥುನ್, ದಿನೇಶ್, ಮನೋಹರ್, ಯಶವಂತ್ ವಿರುದ್ದ ಬೈಕನ್ನು ಅಡ್ಡಗಟ್ಟಿ ಚುನಾವಣಾ ಸಿಬ್ಬಂದಿ ಹೆಸರಲ್ಲಿ ಹಣ ದೋಚಿದ ಪ್ರಕರಣ ದಾಖಲಾಗಿದೆ.
ತಲದುಮ್ಮನಹಳ್ಳಿ ಗ್ರಾಮದ ಮಂಜುನಾಥ್ ನೀಡಿರುವ ದೂರಲ್ಲಿ, ಬೆಳ್ಳೂಟಿ ಗ್ರಾಮದ ವೆಂಕಟೇಶಪ್ಪ ಎಂಬುವವರಿಗೆ ಅವರು ಕಲ್ಯಾಣ ಮಂಟಪ ನಿರ್ಮಿಸುವಾಗ 19 ಲಕ್ಷ ರೂ.ಕೈಸಾಲವನ್ನು ಕಳೆದ ಎಂಟು ತಿಂಗಳ ಹಿಂದೆ ನೀಡಿದ್ದೆ.
ಕೊಟ್ಟಿದ್ದ ಸಾಲವನ್ನು ವಾಪಸ್ ನೀಡುವುದಾಗಿ ವೆಂಕಟೇಶ್ ಹೇಳಿದ ಕಾರಣ ಹಣ ಕೊಡಿಸಿಕೊಳ್ಳಲು ನಾನು ಮತ್ತು ನನ್ನ ಸ್ನೇಹಿತ ಕನ್ನಮಂಗಲ ಗ್ರಾಮದ ಮುನೇಗೌಡ ಅವರ ಜತೆಗೂಡಿ ಬೆಳ್ಳೂಟಿ ಗ್ರಾಮದ ವೆಂಕಟೇಶ್ ಅವರ ಮನೆಗೆ ಇದೆ ಮೇ 9 ರಂದು ಹೋಗಿದ್ದೆ.
ವೆಂಕಟೇಶ್ ಅವರು ಬೆಂಗಳೂರಿಗೆ ಹೋಗಿದ್ದ ಕಾರಣ ಅವರು ತಡವಾಗಿ ಬಂದು ನಮ್ಮ ಹಣವನ್ನು ಕೊಟ್ಟರು. ನಾನು ಹಣವನ್ನು ಬ್ಯಾಗಿನಲ್ಲಿ ಇರಿಸಿಕೊಂಡು ಬೈಕ್‌ನಲ್ಲಿ ಬೆಳ್ಳೂಟಿ ಗ್ರಾಮದ ಗಂಗರೆಡ್ಡಿ ಎನ್ನುವವರ ಮನೆ ಮುಂದೆ ಸಾಗುತ್ತಿದ್ದಾಗ ಅದೇ ಗ್ರಾಮದ ಮೋಹನ್, ವೇಣು ಎನ್ನುವವರು ಬೈಕ್‌ನಲ್ಲಿ ಬಂದು ನಮ್ಮನ್ನು ಅಡ್ಡಗಟ್ಟಿದರು.
ನಾವು ಚುನಾವಣಾ ಸ್ಕ್ವಾಡ್ ಎಂದು ಹೇಳಿಕೊಂಡು ನೀವು ಚುನಾವಣೆಗೆ ಹಂಚಲು ಹಣ ಸಾಗಿಸುತ್ತಿರುವುದಾಗಿ ದೂರು ಬಂದಿದ್ದು ಪೊಲೀಸರನ್ನು ಕರೆಸುವುದಾಗಿ ಹೇಳಿ ಯಾರಿಗೋ ಕರೆ ಮಾಡಿದಾಗ ಅದೇ ಗ್ರಾಮದ ಅರುಣ್, ಮಿಥುನ್, ದಿನೇಶ್, ಮನೋಹರ್, ಯಶವಂತ್ ಬೈಕುಗಳಲ್ಲಿ ಬಂದರು.
ಎಲ್ಲರೂ ಸೇರಿ ನಮ್ಮ ಬಳಿ ಇದ್ದ 19 ಲಕ್ಷ ರೂಗಳನ್ನು ಬಲವಂತವಾಗಿ ಕಿತ್ತುಕೊಂಡರು. ನಾವು ಅನುಮಾನಗೊಂಡು ಅವರನ್ನು ಹಿಂಬಾಲಿಸಿದಾಗ ಅವರುಗಳು ಅವರವರ ಮನೆಗೆ ತೆರಳಿದರು. ನಾವು ಅವರುಗಳ ಹಿರಿಯರ ಬಳಿ ವಿಷಯ ತಿಳಿಸಿದಾಗ ಅವರು ಎಲ್ಲರನ್ನೂ ಕರೆಸಿ ಹಣ ವಾಪಸ್ ಕೊಡಿಸಿಕೊಟ್ಟರು.
ಆದರೆ 19 ಲಕ್ಷ ರೂ.ಬದಲಿಗೆ 13 ಲಕ್ಷ ರೂ.ಗಳಷ್ಟೆ ಇತ್ತು. ಬಾಕಿ 6 ಲಕ್ಷ ರೂಗಳನ್ನು ವಾಪಸ್ ಮಾಡಲು ಕಾಲಾವಕಾಶ ಕೋರಿದರು.
ಆದರೆ ಇದುವರೆಗೂ ಉಳಿದ ಹಣ ವಾಪಸ್ ನೀಡಿಲ್ಲವಾದ್ದರಿಂದ ಚುನಾವಣಾ ಸ್ಕ್ವಾಡ್ ಎಂದು ಸುಳ್ಳು ಹೇಳಿ ನಮ್ಮಿಂದ ಹಣವನ್ನು ಬಲವಂತವಾಗಿ ಕಿತ್ತುಕೊಂಡ ಹೋಗಿರುವ ಈ ಎಲ್ಲರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಮಂಜುನಾಥ್ ದೂರು ದಾಖಲಿಸಿದ್ದಾರೆ.