Home News ಶಾಂತಿಯುತವಾಗಿ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ

ಶಾಂತಿಯುತವಾಗಿ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ

0

ನಗರದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯು ಬುಧವಾರ ಬಹುತೇಕ ಶಾಂತಿಯುತವಾಗಿ ನಡೆಯಿತು.

ಆಗ್ನೇಯ ಪದವೀಧರ ಕ್ಷೇತ್ರದ ಮತದಾನಕ್ಕಾಗಿ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ಮತಗಟ್ಟೆ ಸೇರಿದಂತೆ ದಿಬ್ಬೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಒಂದು ಮತಗಟ್ಟೆ ಸ್ಥಾಪಿಸಿದ್ದ ತಾಲ್ಲೂಕು ಆಡಳಿತ ಶಾಂತಿಯುತ ಮತದಾನಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿತ್ತು.

ಕೊರೋನಾ ಹಿನ್ನಲೆಯಲ್ಲಿ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.

ಬುಧವಾರ ಬೆಳಿಗ್ಗೆ ಎಂಟು ಗಂಟೆಗೆ ಮತದಾನ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಬೆಳಿಗ್ಗೆಯೇ ಉತ್ಸಾಹ ಭರಿತರಾಗಿ ಬೇಗ ಬಂದು ಸರತಿಸಾಲುಗಳಲ್ಲಿ ನಿಂತು ಪದವೀಧರ ಮತದಾರರು ಮತದಾನ ಮಾಡಿದರಾದರೂ ಮಧ್ಯಾಹ್ನದ ನಂತರ ಮತದಾನ ಪ್ರಕ್ರಿಯೆ ಬಿರುಸುಗೊಂಡಿತು.

ಚುನಾವಣೆ ಹಿನ್ನಲೆಯಲ್ಲಿ ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ತಮ್ಮ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯ ಪರ ಮತಯಾಚಿಸಲು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿಕೊಂಡು ಮತ ಯಾಚಿಸುತ್ತಿದ್ದುದು ವಿಶೇಷವಾಗಿತ್ತು.

ಮತದಾರರು ಮತಗಟ್ಟೆಯ ಸಮೀಪಕ್ಕೆ ಬರುತ್ತಿದ್ದಂತೆ ಮತದಾರನನ್ನು ಮುತ್ತಿಕೊಳ್ಳುತ್ತಿದ್ದ ವಿವಿಧ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಮತ ಹಾಕಿ ಅವಕಾಶ ನೀಡುವಂತೆ ಮನವಿ ಮಾಡುತ್ತಾ ನಮಸ್ಕಾರ ಹಾಕುವ ಜೊತೆಗೆ ಮತದಾರರಿಗೆ ನೀರು, ಜ್ಯೂಸ್, ಸೇರಿದಂತೆ ಮಜ್ಜಿಗೆಯಂತಹ ಪಾನೀಯಗಳನ್ನು ವಿತರಿಸಿ ಮತ ಯಾಚಿಸುತ್ತಿದ್ದುದು ವಿಶೇಷವಾಗಿತ್ತು.