Sidlaghatta : ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಪಕ್ಷದಿಂದ ದಿನೇ ದಿನೇ ಟಿಕೆಟ್ ಬಯಸುವ ಆಕಾಂಕ್ಷಿಗಳ ಸಂಖ್ಯೆ ಏರುತ್ತಿದೆ. ಶಾಸಕ ವಿ.ಮುನಿಯಪ್ಪ ತಾವು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದು, ಬ್ಯಾಲಹಳ್ಳಿ ಗೋವಿಂದೇಗೌಡರಿಗೆ ಬೆಂಬಲಿಸುತ್ತಿರುವುದಾಗಿ ಪ್ರಕಟಿಸುತ್ತಿದ್ದಂತೆಯೇ, ಮತ್ತೊಬ್ಬ ಆಕಾಂಕ್ಷಿ ರಾಜೀವ್ ಗೌಡ ತಮ್ಮ ಬೆಂಬಲಿಗರ ಮೂಲಕ ಬಲಪ್ರದರ್ಶನ ಮಾಡಿದ್ದರು. ಕೊತ್ತನೂರು ಪಂಚಾಕ್ಷರಿರೆಡ್ಡಿ ತಾವು ಕೂಡ ಆಕಾಂಕ್ಷಿಯೇ ಎಂದು ಪ್ರಕಟಿಸಿದರು.
ಈ ಬೆಳವಣಿಗೆಯ ಮಧ್ಯೆ ಕಳೆದ ಚುನಾವಣೆಯಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆಂಜಿನಪ್ಪ ಪುಟ್ಟು ಅವರು ಇದೀಗ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. ಪುಟ್ಟು ಆಂಜಿನಪ್ಪ ಅವರು ತಾಲ್ಲೂಕಿನಾದ್ಯಂತ ಈಗಾಗಲೇ ಮನೆ ಮನೆಗೂ ಭೇಟಿ ಅಭಿಯಾನವನ್ನು ಪೂರ್ಣಗೊಳಿಸಿದ್ದಾರೆ. ಈ ಯಶಸ್ಸಿನ ಹಿನ್ನಲೆಯಲ್ಲಿ ತಮ್ಮ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರಿಗಾಗಿ ಸಭೆ ಹಾಗೂ ಔತಣ ಕೂಟವನ್ನು ಹಮ್ಮಿಕೊಂಡಿದ್ದರು.
ದಿಬ್ಬೂರಹಳ್ಳಿ ಮಾರ್ಗದ ಅಜ್ಜಕದಿರೇನಹಳ್ಳಿ ಬಳಿ ಇರುವ ತಮ್ಮ ತೋಟದ ಮನೆಯಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ತನ್ನ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಪುಟ್ಟು ಆಂಜಿನಪ್ಪ ಮಾತನಾಡಿ, ಈ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದಲೂ ನಾನು ಜನರ ಮನೆ ಮನವನ್ನು ತಲುಪುವ ಕೆಲಸವನ್ನು ಮಾಡಿದ್ದೇನೆ.
ಕೊರೊನಾದಂತ ಸಂಕಷ್ಟ ಕಾಲದಲ್ಲಿ ಖುದ್ದು ನಾನೇ ಕೊರೊನಾಗೆ ತುತ್ತಾದರೂ ಎದೆಗುಂದದೆ ಜನರ ಮದ್ಯೆ ಬಂದು ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂಧಿಸಿದ್ದೇನೆ. ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ನಾನು ರಾಜಕಾರಣ ಮಾಡಲು ಇಲ್ಲಿಗೆ ಬಂದಿಲ್ಲ ಅದರ ಅನಿವಾರ್ಯವೂ ನನಗಿಲ್ಲ ಎಂದರು.
ವೈರತ್ವದ ರಾಜಕಾರಣ ನನಗಷ್ಟೆ ಅಲ್ಲ ನನ್ನ ವಿರೋಧಿಗಳಿಗೂ ಬೇಡ, ನಾನು ಎಲ್ಲರ ತಮ್ಮನಾಗಿ ಹಿರಿಯರಿಗೆ ಮಗನಾಗಿ ಪ್ರತಿ ಮನೆ ಮನೆಗೂ ಭೇಟಿ ನೀಡಿ ಅವರ ಕಷ್ಟ ಸುಖವನ್ನು ಚರ್ಚಿಸಿ ಗ್ರಾಮಗಳಲ್ಲಿ ಆಗಬೇಕಾದ ಅಭಿವೃದ್ದಿ ಮೂಲ ಸೌಕರ್ಯಗಳ ಬಗ್ಗೆ ತಿಳಿದುಕೊಂಡು ಕ್ರಿಯಾ ಯೋಜನೆಯನ್ನು ರೂಪಿಸಿದ್ದೇನೆ.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ನಾನು ಯಾರ ವಿರುದ್ದವೂ ಸ್ಪರ್ಧಿಸಿಲ್ಲ. ನನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸ್ಪರ್ಧಿಸಿದ್ದೆ. 11 ಸಾವಿರ ಮತದಾರರು ನನ್ನ ಕೈ ಹಿಡಿದ್ದು ನನಗೆ ಸಂತಸ ತಂದಿದೆ. ಹಠಕ್ಕೆ ಬಿದ್ದು ಗೆಲ್ಲಬೇಕೆಂಬ ಉದ್ದೇಶ ನನಗಿಲ್ಲ.
ನಾನು ಸೋತಿದ್ದೇನೆ ಎಂದು ಅನುಕಂಪ ತೋರಿ ನನಗೆ ಮತ ನೀಡಬೇಡಿ, ವೈರತ್ವ ಇಲ್ಲದ ಎಲ್ಲರೂ ಅಣ್ಣ ತಮ್ಮಂದಿರಂತೆ ಜಾತಿ ಮತದ ತಾರತಮ್ಯವಿಲ್ಲದ ಅಭಿವೃದ್ದಿಗಾಗಿ ಮಾತ್ರ ನನಗೆ ಮತ ನೀಡಿ, ನೀವೆಲ್ಲರೂ ನಾನು ನಿಮ್ಮೊಂದಿಗೆ ಇರಬೇಕೆಂದು ಬಯಸಿದರಷ್ಟೆ ನಾನು ಈ ಕ್ಷೇತ್ರದಲ್ಲಿ ನಿಮ್ಮೊಂದಿಗೆ ಬೆರೆತು ಮುಂದುವರೆಯುತ್ತೇನೆ ಇಲ್ಲವೇ ನಾನು ವಾಪಸ್ ಹೋಗುತ್ತೇನೆಂದು ಭಾವುಕರಾದರು.
ನೆರೆದಿದ್ದ ಅವರ ಅಭಿಮಾನಿಗಳು ನಿಮ್ಮಂತ ನಾಯಕರು ಈ ಕ್ಷೇತ್ರಕ್ಕೆ ಅಗತ್ಯವಿದೆ, ವಿ.ಮುನಿಯಪ್ಪ ಅವರು ಸಹ ಅವರ ಅನಾರೋಗ್ಯದ ಕಾರಣದಿಂದ ನಮ್ಮನ್ನು ಕೈ ಬಿಟ್ಟಾಗ ನಮ್ಮೊಂದಿಗೆ ನಿಂತಿದ್ದು ನೀವು ನಮ್ಮಲ್ಲಿ ಆತ್ಮಸ್ಥೈರ್ಯ ತುಂಬಿದ್ದ ನಿಮ್ಮಂತ ನಾಯಕರು ಇರಬೇಕೆಂದು ಘೋಷಣೆಗಳನ್ನು ಕೂಗಿದರು.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ರಾಮಚಂದ್ರಪ್ಪ, ಮಂಡಲ್ ಮಾಜಿ ಪ್ರಧಾನಿ ಹಿತ್ತಲಹಳ್ಳಿ ಕೃಷ್ಣಪ್ಪ, ಎಚ್.ಕೆ.ರಮೇಶ್, ಬೆಳ್ಳೂಟಿ ಸಂತೋಷ್, ದಿಬ್ಬೂರಹಳ್ಳಿ ಅಶ್ವತ್ಥರೆಡ್ಡಿ, ಚಂದ್ರಪ್ಪ, ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.