ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿಯ ಕೆಲವು ಹಳ್ಳಿಗಳಲ್ಲಿ ಭಾನುವಾರ ರಾತ್ರಿ ದೊಡ್ಡ ಶಬ್ದ ಕೇಳಿಸಿ, ಭೂಮಿ ಅದುರಿದಂತಾಗಿ, ಕೆಲ ಮನೆಗಳ ಪಾತ್ರೆಗಳು ಉರುಳಿಬಿದ್ದಿವೆ. ಭೂಮಿ ನಡುಗಿದ ಅನುಭವವಾದ್ದರಿಂದ ಈ ಹಳ್ಳಿಗಳ ಜನರು ಗಾಬರಿಗೊಂಡು ಮನೆಯಿಂದ ಹೊರಗೆ ಬಂದಿದ್ದಾರೆ.
ಗಾಂಡ್ಲಚಿಂತೆ, ಬಂಡಹಳ್ಳಿ, ಜಿ.ನಕ್ಕಲಹಳ್ಳಿ ಮತ್ತು ಆಟಗೊಲ್ಲಹಳ್ಳಿ ಗ್ರಾಮಗಳಲ್ಲಿ ರಾತ್ರಿ 8.45 ಗಂಟೆಯಲ್ಲಿ ಜೋರಾದ ಶಬ್ದ ಕೇಳಿಸಿದೆ. ಜನರು ಭೂಕಂಪನ ವಾಗಿರಬಹುದೆಂದು ಭಾವಿಸಿದ್ದಾರೆ. ಈ ವಿಷಯವನ್ನು ತಿಳಿದ ಪೊಲೀಸರು ರಾತ್ರಿ ಈ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಒಂದು ಬಾರಿ ಅದೂ ಒಂದು ನಿಮಿಷದ ಒಳಗೆ ಸಂಭವಿಸಿದ್ದ ಈ ಭಾರೀ ಶಬ್ದ ಮತ್ತು ಕಂಪನದಿಂದ ರಾತ್ರಿಯಿಡೀ ಗ್ರಾಮಸ್ಥರು ಆತಂಕದಿಂದ ಕಾಲ ತಳ್ಳಿದ್ದಾರೆ.
ಕಳೆದ ನವೆಂಬರ್ ತಿಂಗಳಿನಲ್ಲಿ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಹೋಬಳಿ ವ್ಯಾಪ್ತಿಯ ಮಿಟ್ಟಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತ ಕೂಡ ಇದೇ ರೀತಿಯಾದ ಶಬ್ದ ಮತ್ತು ಕಂಪನ ಸಂಭವಿಸಿತ್ತು. ಅಲ್ಲಿಗೆ ಜಿಲ್ಲಾಧಿಕಾರಿ ಸೇರಿದಂತೆ ತಜ್ಞರ ತಂಡ ಭೇಟಿ ನೀಡಿದ್ದರು. ಭೂಮಿ ಕೆಳ ಪದರಗಳಲ್ಲಿ ಭಾರೀ ಪ್ರಮಾಣದ ನೀರು ಹರಿವಿನ ಹಿನ್ನೆಲೆ ಈ ರೀತಿ ಏರ್ ಬ್ಲಾಸ್ಟ್ ಆಗುವುದು ಸಾಮಾನ್ಯ. ಏರ್ ಬ್ಲಾಸ್ಟ್ ಸಂದರ್ಭದಲ್ಲಿ ಇಂತಹ ಜೋರು ಶಬ್ದ ಕೇಳುವುದು ಸಾಮಾನ್ಯ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ತಜ್ಞರು ವಿವರಿಸಿದ್ದರು.
ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿಯ ಗಾಂಡ್ಲಚಿಂತೆ, ಬಂಡಹಳ್ಳಿ, ಜಿ.ನಕ್ಕಲಹಳ್ಳಿ ಮತ್ತು ಆಟಗೊಲ್ಲಹಳ್ಳಿ ಗ್ರಾಮಗಳಲ್ಲಿ ಕೂಡ ಇತ್ತೀಚಿನ ಮಳೆಗೆ ಕೊಳವೆಬಾವಿಗಳೆಲ್ಲ ಮರುಪೂರಣಗೊಂಡಿವೆ. ಇತ್ತೀಚೆಗೆ ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗಿದ್ದು ಮಳೆಯ ನೀರು ಭೂಮಿಯೊಳಗೆ ಇಂಗುವ ಸಂದರ್ಭದಲ್ಲಿ ಭೂಮಿ ಪದರಗಳ ಮಧ್ಯೆ ಸಾಕಷ್ಟು ಬಿರುಕು ಇರುವುದರಿಂದ ಈಗ ಮಳೆಯ ನೀರು ಭೂಮಿಯೊಳಗೆ ಇಂಗುವ ಸಂದರ್ಭದಲ್ಲಿ ಒಳಗೆ ಈ ರೀತಿಯ ಏರ್ ಬ್ಲಾಸ್ಟ್ ಆಗುವ ಸಾಧ್ಯತೆಗಳು ಇರುತ್ತೇವೆಯೆಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು. ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿಯ ಗಾಂಡ್ಲಚಿಂತೆ, ಬಂಡಹಳ್ಳಿ, ಜಿ.ನಕ್ಕಲಹಳ್ಳಿ ಮತ್ತು ಆಟಗೊಲ್ಲಹಳ್ಳಿ ಸುತ್ತಮುತ್ತ ವ್ಯಾಪಕ ಪ್ರಮಾಣದಲ್ಲಿ ರೈತರು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಹೀಗಾಗಿ ಈ ರೀತಿಯ ಏರ್ ಬ್ಲಾಸ್ಟ್ ಆಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.