Dyavappanagudi, Sidlaghatta : ಗ್ರಾಮೀಣ ಭಾಗದ ಮಕ್ಕಳು ಇಂದಿನ ಸ್ಪರ್ಧಾಯುಗದಲ್ಲಿ ನಗರಪ್ರದೇಶದಲ್ಲಿ ಕಲಿತ ಮಕ್ಕಳಿಗೆ ಸರಿಸಮಾನವಾಗಿ ಉನ್ನತಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ಸ್ಪರ್ಧೆ ಎದುರಿಸುವುದು ಕಷ್ಟಕರವಾಗಿದೆ. ಮಕ್ಕಳು ಕಲಿಕೆಯಲ್ಲಿ ಶಿಸ್ತು ಮೂಡಿಸಿಕೊಂಡು ಆತ್ಮವಿಶ್ವಾಸದಿಂದ ವ್ಯಾಸಂಗ ಮಾಡಬೇಕು ಎಂದು ಅಬ್ಲೂಡು ಗ್ರಾಮಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಬೈರೇಗೌಡ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 11 ಮಂದಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಸಮಯಪ್ರಜ್ಞೆ ಇರಬೇಕು. ಉತ್ತಮ ಗುರಿಯನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ಧೆ ಮತ್ತು ನಿಷ್ಟೆಯಿಂದ ಕಲಿಯಬೇಕು. ಆಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ. ಮಕ್ಕಳಲ್ಲಿ ಅಧ್ಯಯನಾಸಕ್ತಿ ಕ್ಷೀಣಿಸುತ್ತಿದೆ. ಮೌಲ್ಯಗಳು ಕುಸಿಯುತ್ತಿದ್ದು, ಪಠ್ಯದ ಜೊತೆಗೆ ಉತ್ತಮ ಮೌಲ್ಯಗಳನ್ನು ಬೆಳೆಸಬಲ್ಲ ಪುಸ್ತಕಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳು ಗುರು ಹಿರಿಯರಲ್ಲಿ ಗೌರವಾದರಗಳನ್ನು ತೋರುವ ಗುಣ ಬೆಳೆಸಿಕೊಳ್ಳಬೇಕು. ಪೋಷಕರೂ ಮಕ್ಕಳ ಕಲಿಕೆಯ ಕಡೆ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.
ಮುಖ್ಯಶಿಕ್ಷಕ ಬೈರಾರೆಡ್ಡಿ ಮಾತನಾಡಿ, ನಮ್ಮ ಶಾಲೆಗೆ ಕಳೆದ ಎರಡು ವರ್ಷಗಳಿಂದಲೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದಿದ್ದು ಗ್ರಾಮೀಣಭಾಗದ ಮಕ್ಕಳ ಶಿಕ್ಷಣಕ್ಕೆ ಉತ್ತಮ ವಿಫುಲ ಅವಕಾಶಗಳಿವೆ. ಮಕ್ಕಳ ಕಲಿಕೆಯಲ್ಲಿ ಸಮಯಪಾಲನೆಯು ಪೂರಕವಾದುದು. ಸರಿಯಾದ ವೇಳಾಪಟ್ಟಿ ಮೂಲಕ ಎಲ್ಲಾ ವಿಷಯಗಳಿಗೂ ಸರಿಯಾದ ಆದ್ಯತೆಯನ್ನು ನೀಡಿ ಆಸಕ್ತಿಯಿಂದ ಕಲಿತರೆ ಸಾಧನೆಯು ಸುಲಭ ಸಾಧ್ಯವಾಗುತ್ತದೆ ಎಂದರು.
ಶಿಕ್ಷಕ ಎಂ.ಪಿ.ಜೀವೇಂದರ್‌ಕುಮಾರ್ ಮಾತನಾಡಿ, ಮಕ್ಕಳಲ್ಲಿ ಮಾಧ್ಯಮಗಳ ಪ್ರಭಾವವು ನಕಾರಾತ್ಮಕವಾಗಿ ಪರಿಣಾಮ ಬೀರುತ್ತಿದ್ದು, ಹಾಗಾಗದಂತೆ ಪೋಷಕರು ತಡೆಯಬೇಕು. ಸಿಕ್ಕ ಸಮಯದಲ್ಲಿ ಓದಿ ಮನನ ಮಾಡಿಕೊಳ್ಳುವುದರ ಜೊತೆಗೆ ಅಂದಿನ ಪಾಠವನ್ನು ಅಂದೇ ಅರ್ಥೈಸಿಕೊಳ್ಳುವ ಬಗ್ಗೆ ಒಲವು ಮೂಡಬೇಕು. ಪೋಷಕರು ಮಕ್ಕಳ ಕಲಿಕಾಸಾಧನೆಗೆ ಬೆನ್ನುಲುಬಾಗಿ ನಿಲ್ಲಬೇಕು. ಅಗತ್ಯ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ ಎಂದರು.
ಶಿಕ್ಷಕ ಬಿ.ಎಂ.ರಾಧಾಕೃಷ್ಣ ಮಾತನಾಡಿ, ಮಕ್ಕಳಲ್ಲಿ ಉತ್ತಮವಾಗಿ ಕಲಿತು ಸಾಧಿಸಬೇಕೆಂಬ ಛಲ, ಆತ್ಮಸ್ಥೈರ್ಯವು ವೈಯಕ್ತಿಕವಾಗಿ ಮನೆಮಾಡಿಕೊಳ್ಳಬೇಕು. ಸತತ ಅಭ್ಯಾಸದಿಂದ ಮಾತ್ರ ಕಲಿತ ವಿಷಯದ ಧಾರಣಶಕ್ತಿಯು ವೃದ್ಧಿಯಾಗಿ ಸ್ಮರಣೆಗೆ ಬರುತ್ತದೆ. ನಿರಂತರ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಪ್ರತಿ ಮಗುವಿನ ಸಾಧನೆಯ ಹಿಂದೆ ಪೋಷಕರ ತ್ಯಾಗ ಅಡಗಿರುತ್ತದೆ. ಕಲಿಕೆಗೆ ಬಡತನವು ಅಡ್ಡಿಯಾಗದು. ಮಕ್ಕಳ ಪ್ರತಿಭೆಗೆ ಸೂಕ್ತವಾದ ವೇದಿಕೆಯನ್ನು ಕಲ್ಪಿಸಿ ಪ್ರೋತ್ಸಾಹಿಸಿದರೆ ಮಗುವಿನಲ್ಲಿರುವ ಅರಿವು ಜಾಗೃತಗೊಂಡು ಉತ್ತಮ ಸಾಧನೆ ಮಾಡಲು ಸಹಾಯಕವಾಗುತ್ತದೆ ಎಂದರು.
ಕಳೆದ ಮಾರ್ಚಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು. ಶಿಕ್ಷಕಿ ಯಶೋಧ, ಸಿ.ಕೆ.ಮಂಜುಳಾ, ಪವಿತ್ರಬಡಿಗೇರ, ಶೈಲಜಾ, ಗಾಯಿತ್ರಿ, ಮೆಹಬೂಬ್‌ಪಾಶಾ, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.