Dyavappanagudi, Sidlaghatta : ಶಿಕ್ಷಕರಾದವರಲ್ಲಿ ಸ್ವಯಂಶಿಸ್ತು ಕರಗತವಾಗಿರಬೇಕು. ಸಮಯಪ್ರಜ್ಞೆ ಹೊಂದಿದ್ದು ವೃತ್ತಿಯಲ್ಲಿನ ಸೇವಾಕರ್ತವ್ಯಗಳ ಬಗ್ಗೆ ಸಾಕಷ್ಟು ಬದ್ಧತೆಯಿದ್ದರೆ ಉತ್ತಮ ಶಿಕ್ಷಕರಾಗಲು ಸಾಧ್ಯ. ಒಂದು ಸಭ್ಯ ಸಮಾಜವನ್ನು ಸೃಷ್ಟಿಸುವಲ್ಲಿ ಶಿಕ್ಷಕರಿಗೆ ಮಾತ್ರ ಸಾಕಷ್ಟು ಅವಕಾಶಗಳಿರುತ್ತವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಎಸ್.ರಘುನಾಥರೆಡ್ಡಿ ತಿಳಿಸಿದರು.
ತಾಲ್ಲೂಕಿನ ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿವೃತ್ತ ಶಿಕ್ಷಕರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅರ್ಹ ವಯಸ್ಸಿನ ಮಕ್ಕಳು ಮಾನಸಿಕ ಮತ್ತು ಮನೋವೈಜ್ಞಾನಿಕವಾಗಿ ಗಳಿಸಬೇಕಾದ ಕಲಿಕಾಸಾಮರ್ಥ್ಯಗಳನ್ನು ಗಳಿಸಿಕೊಂಡು ಭೌದ್ಧಿಕ ಬೆಳವಣಿಗೆ ಹೊಂದುವಲ್ಲಿ ಶಿಕ್ಷಕರು ಅಗತ್ಯಕ್ರಮಗಳನ್ನು ಕೈಗೊಳ್ಳಬೇಕು. ಮಗುವಿನಲ್ಲಿನ ಸರ್ವತೋಮುಖ ಕೌಶಲಗಳನ್ನು ಹೊರತೆಗೆದು ಪೋಷಿಸಿ ಪ್ರೋತ್ಸಾಹ ನೀಡಬೇಕಾದ ಜವಾಭ್ದಾರಿಯು ಶಿಕ್ಷಕರ ಮೇಲಿದೆ ಎಂದರು.
ನಿವೃತ್ತ ಕ್ಷೇತ್ರಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ ಮಾತನಾಡಿ, ಒಬ್ಬ ವ್ಯಕ್ತಿಯು ಸಮಾಜದಲ್ಲಿ ಸಭ್ಯ ನಡೆತೆಯುಳ್ಳವನಾಗಿ ಬೆಳೆದು ಬದುಕು ರೂಪಿಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಮಗುವಿನ ಜ್ಞಾನದ ಮಾರ್ಗವನ್ನು ತೋರಿ ಬೆಳಗಿಸುವ ಕಾರ್ಯವು ಶಿಕ್ಷಕರಿಂದಾಗಬೇಕು ಎಂದರು.
ನಿವೃತ್ತ ಮುಖ್ಯಶಿಕ್ಷಕ ಬೈರಾರೆಡ್ಡಿ ಮಾತನಾಡಿ, ನಮ್ಮ ವಿದ್ಯಾರ್ಥಿಗಳ ಪಾಳಿಗೆ ಶಿಕ್ಷಕರಾದ ನಾವೇ ಹೀರೋಗಳಂತಾಗಬೇಕು. ಶಿಕ್ಷಕರಲ್ಲಿ ತಾಳ್ಮೆ, ಕಾಳಜಿ, ಸಮರ್ಪಣಾಭಾವ ಗುಣವಿದ್ದು ವಿದ್ಯಾರ್ಥಿಗಳ ಪಾಲಿಗೆ ಸ್ಫೂರ್ತಿಯ ಸೆಲೆಯಾಗಿರಬೇಕು ಎಂದರು.
ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ಮಾತನಾಡಿ, ಗುಣಾತ್ಮಕ ಶಿಕ್ಷಣ ಕಾಯ್ದುಕೊಳ್ಳುವಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರಲ್ಲಿನ ಮನೋಗುಣ ಬದಲಾಗಬೇಕು. ಸದಾ ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಮಾತುಗಳಿಂದಲೇ ನೈತಿಕ ಸ್ಥೈರ್ಯ ತುಂಬುವ, ಪ್ರಕಾಶಮಾನವಾದ ಮತ್ತು ಅರ್ಥಪೂರ್ಣವಾದ ಬದುಕು ಕಟ್ಟಿಕೊಳ್ಳಲು ಬೇಕಾದ ಗುಣವನ್ನು ಬೆಳೆಸಬೇಕು ಎಂದರು.
ನಿವೃತ್ತರಾದ ಮುಖ್ಯಶಿಕ್ಷಕ ಬೈರಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಬೆಂಗಳೂರಿನ ದೊಡ್ಡನೆಕ್ಕುಂದಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಗಣೇಶ್, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಗ್ರಾಮಪಂಚಾಯಿತಿ ಮಾಜಿ ಸದಸ್ಯ ಬೈರೇಗೌಡ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್.ನಾರಾಯಣಸ್ವಾಮಿ ಮಾತನಾಡಿದರು. ಮಾಜಿ ಅಧ್ಯಕ್ಷ ಸಿ.ಎಂ.ಮುನಿರಾಜು, ಜಿಲ್ಲಾ ಖಜಾಂಚಿ ಪಿಳ್ಳಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಗೋಪಾಲಕೃಷ್ಣ, ಮಾಜಿ ಅಧ್ಯಕ್ಷ ಆರ್.ವಿ.ರೆಡ್ಡಿ, ಮಲ್ಲಿಕಾರ್ಜುನ್, ತಾಲ್ಲೂಕು ಉಪಾಧ್ಯಕ್ಷ ಎಂ.ಕೆ.ಸಿದ್ಧರಾಜು, ಖಜಾಂಚಿ ಹೇಮಾವತಿ, ಶಿಕ್ಷಣ ಸಂಯೋಜಕಿ ಪರಿಮಳಾ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಮುರಳಿ, ನಿವೃತ್ತ ಮುಖ್ಯಶಿಕ್ಷಕ ಎನ್.ಎಂ.ಶ್ರೀನಿವಾಸ್, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ಹಾಜರಿದ್ದರು.