Sidlaghatta : ವಾರ್ಡಿನಲ್ಲಿ ರಸ್ತೆ, ಕುಡಿಯುವ ನೀರು, ಬೀದಿ ದ್ವೀಪ ಕಲ್ಪಿಸುವುದು ಸೇರಿದಂತೆ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಂತೆ ಆಗ್ರಹಿಸಿ ನಗರದ ಟಿಎಂಸಿ ಲೇ ಔಟ್ ನಾಗರಿಕರು, ನಗರಸಭೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಳೆದ 20 ವರ್ಷಗಳಿಂದ ವಾರ್ಡಿನ ಪ್ರಮುಖ ರಸ್ತೆಗೆಳಿಗೆ ಡಾಂಬರು ಹಾಕಿಲ್ಲ, ವಾರ್ಡಿನಾದ್ಯಂತ ಕುಡಿಯುವ ನೀರು ಹಾಗು ಬೀದಿ ದೀಪದ ಸಮಸ್ಯೆಯಿದೆ. ಈ ಬಗ್ಗೆ ನಾಗರಿಕರು ಹಲವಾರು ಬಾರಿ ನಗರಸಭೆಗೆ ಮನವಿ ಸಲ್ಲಿಸಿದ್ದರಾದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ.
ಬಹುತೇಕ ಕೂಲಿ ಕಾರ್ಮಿಕರು, ರೇಷ್ಮೆ ನೂಲು ಬಿಚ್ಚಾಣಿಕೆ ಕಾರ್ಮಿಕರೆ ಹೆಚ್ಚಿರುವ ಇಲ್ಲಿ ರಸ್ತೆ ಸರಿಯಿಲ್ಲದ ಕಾರಣ ಆಟೋ ಸಹ ಬರುವುದಿಲ್ಲ. ರಾತ್ರಿಯ ವೇಳೆ ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾದರೆ ಆಸ್ಪತ್ರೆಗೆ ಹೋಗಬೇಕಾದರೂ ಯಾವುದೇ ಆಟೋ ಸಹ ಬರುವುದಿಲ್ಲ. ಇನ್ನು ರಸ್ತೆಯ ತುಂಬಾ ಬೀದಿ ನಾಯಿಗಳು ಹೆಚ್ಚಾಗಿದ್ದು ರಸ್ತೆಯಲ್ಲಿ ಓಡಾಡಲು ಆಗುವುದಿಲ್ಲ. ಈ ಬಗ್ಗೆ ಸುಮಾರು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಈ ಕೂಡಲೇ ರಸ್ತೆ ಸೇರಿದಂತೆ ವಾರ್ಡಿನಲ್ಲಿರುವ ವಿವಿಧ ಸಮಸ್ಯೆಗಳು ಬಗೆಹರಿಸಬೇಕು ಎಂದು ನಾಗರಿಕರು ಒತ್ತಾಯಿಸಿದರು.
ನಗರಸಭೆ ಪೌರಾಯುಕ್ತ ಆಂಜನೇಯಲು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ನಗರದ ಟಿಎಂಸಿ ಲೇಔಟ್‌ನ ಮುಖ್ಯರಸ್ತೆ ಕಾಮಗಾರಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಒಂದೆರಡು ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇನ್ನುಳಿದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.