Sidlaghatta : ಸತತ ಪರಿಶ್ರಮ, ಏಕಾಗ್ರತೆ ಮತ್ತು ಮಾರ್ಗದರ್ಶನದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಯಿಸಬಹುದು ಎಂದು ತಹಶೀಲ್ದಾರ್ ಬಿ.ಎನ್.ಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ‘ಡಾಲ್ಫಿನ್ಸ್ ಎಡುಸೈನ್ಸ್ ಅಕಾಡೆಮಿ’ ಎಂಬ NEET ಮತ್ತು CET ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕ ಕೇಂದ್ರಿತ ಧೋರಣೆಯಲ್ಲದೆ ಸ್ಪರ್ಧಾ ಕೇಂದ್ರಿತ ಅಭ್ಯಾಸ ಅವಶ್ಯಕವಾಗಿದೆ ಎಂದರು.
“ಅಂಕ ಪಡೆಯುವುದು ಸಾಕು ಅಲ್ಲ, ಜ್ಞಾನವನ್ನು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನ್ವಯಿಸಬಲ್ಲ ಶಕ್ತಿಯನ್ನು ನೀಡುವುದು ಶಿಕ್ಷಣದ ಉದ್ದೇಶವಾಗಬೇಕು. ಹಾಗೆ ಆಗಿದ್ರೆ ಮಾತ್ರ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಾಕಾರಗೊಳಿಸಬಹುದು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಅಪ್ರಾಪ್ತ ವಯಸ್ಸಿನ ಮಕ್ಕಳ ವಿವಾಹ ಅಥವಾ ಅಪಾಯಕಾರಿಯಾದ ಕೆಲಸಗಳಿಗೆ ಅವರ ನೇಮಕ ಮಾಡುವುದನ್ನು ತೀವ್ರವಾಗಿ ವಿರೋಧಿಸಿದರು. “ಇಂತಹ ಪಾಪಕೃತ್ಯಗಳನ್ನು ತಡೆಹಿಡಿಯುವಲ್ಲಿ ಪೋಷಕರು ಹಾಗೂ ಸಾರ್ವಜನಿಕರು ಇಲಾಖೆಗಳಿಗೆ ಸಹಕರಿಸಬೇಕು” ಎಂಬುದಾಗಿ ಹೇಳಿದರು.
ಡಾಲ್ಫಿನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್ ಮಾತನಾಡುತ್ತಾ, “ಶ್ರಮವಿಲ್ಲದೆ ಯಶಸ್ಸಿಲ್ಲ. ಈಗ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವೈದ್ಯ ಅಥವಾ ಇಂಜಿನಿಯರ್ ಆಗಬೇಕಾದರೆ ನಗರಕ್ಕೆ ಹೋಗಬೇಕಿಲ್ಲ. ಇಲ್ಲಿ ಅವರವಶ್ಯಕತೆಗಳಿಗೆ ತಕ್ಕಂತೆ ಅನುಭವಿ ಉಪನ್ಯಾಸಕರನ್ನು ಕರೆತರಲಾಗುತ್ತಿದೆ” ಎಂದರು.
ತರಬೇತುದಾರ ಜಿ. ಶಶಿಧರ್ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಬಗ್ಗೆ ಮಾಹಿತಿ ನೀಡಿದರೆ, ರಾಜೇಂದ್ರಕುಮಾರ್ ಯಶಸ್ಸಿಗೆ ಮಾನವೀಯ ಮೌಲ್ಯಗಳ ಪಾತ್ರದ ಕುರಿತು ಮಾತನಾಡಿದರು.
ಪ್ರಾಂಶುಪಾಲ ಡಾ. ಎನ್. ಶ್ರೀನಿವಾಸಮೂರ್ತಿ ಮಾತನಾಡುತ್ತಾ, “ಹಚ್ಚಿಟ್ಟ ಹಣತೆ ಮತ್ತು ಪಡೆದ ಜ್ಞಾನ ಎಂದಿಗೂ ನಂದದು. ಇವುಗಳ ಶಕ್ತಿ ಸಮಾಜದ ಬೆಳವಣಿಗೆಗೆ ದಾರಿ ತೆರೆದುಕೊಳ್ಳುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಸುದರ್ಶನ್, ಮುನಿಕೃಷ್ಣಪ್ಪ, ಆರೀಫ್ ಅಹಮದ್, ಪ್ರೊ. ನಾಗೇಶ್, ಸಂತೋಷ್ ರೆಡ್ಡಿ, ಗಜೇಂದ್ರ, ಜಾನಕಿರಾಮ್, ನಾಗೇಶಯ್ಯ, ಖದೀರ್ ಅಹಮದ್, ವಿನಯ್ ಕುಮಾರ್, ಸುಬ್ರತ್ ಕುಮಾರ್, ಸಂಪತ್ ಕುಮಾರ್ ಮತ್ತು ಪ್ರವೀಣ್ ಕುಮಾರ್ ಪಾಲ್ಗೊಂಡಿದ್ದರು.