Sidlaghatta : AIDS ರೋಗವು HIV ವೈರಸ್‍ನಿಂದ ಬರುವ ಕಾಯಿಲೆಯಾಗಿದ್ದು, ಈ ವೈರಸ್ ಮನುಷ್ಯನ ದೇಹದಲ್ಲಿ ಮಾತ್ರ ಬದುಕುತ್ತದೆ. ಏಡ್ಸ್‌ಗೆ ಔಷಧಿ ಇಲ್ಲದ್ದರಿಂದ ಈ ರೋಗ ಹರಡುವ ವಿಧಾನಗಳ ಬಗ್ಗೆ ಪ್ರತಿಯೊಬ್ಬರೂ ಅರಿತು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೆ ಹನುಮಂತಪ್ಪ ಹೇಳಿದರು.
ಶಿಡ್ಲಘಟ್ಟ ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಕಾನೂನು ಸೇವಾ ಸಮಿತಿ, ಆರೋಗ್ಯ ಇಲಾಖೆ, ತಾಲ್ಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಅನುಚ್ಛೇದ 21ರ ಪ್ರಕಾರ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಗೌರವದಿಂದ ಜೀವನ ನಡೆಸುವ ಹಕ್ಕು ಇದೆ. ಅದರಂತೆ ಏಡ್ಸ್ ಪೀಡಿತರಿಗೂ ಸಮಾಜದಲ್ಲಿ ಗೌರವದಿಂದ ಬದುಕುವ ಹಕ್ಕಿದೆ. ಏಡ್ಸ್ ರೋಗಿಗಳಿಗೆ ಉಚಿತ ಕಾನೂನು ನೆರವು ಲಭ್ಯವಿದೆ ಎಂದರು.
ಏಡ್ಸ್ ಪೀಡಿತರ ಬಗ್ಗೆ ಜಾಗೃತಿ ಮೂಡಿಸಬೇಕು. ಅವರನ್ನು ಕತ್ತಲೆಯಿಂದ ಬೆಳಕಿಗೆ ತರುವ ಕಾರ್ಯಕ್ರಮವಾಗಬೇಕು. ಸಮಾಜ ಅವರಿಗೆ ಬೆಲೆ ಕೊಡಬೇಕು ಯಾವುದೇ ಕಾರಣಕ್ಕೂ ಅವರನ್ನು ತುಚ್ಚವಾಗಿ ಮತ್ತು ಅಸ್ಯವಾಗಿ ನೋಡಬಾರದು. ಅವರು ನಮ್ಮಂತೆ ಎಂಬ ದೃಷ್ಟಿಯಿಂದ ಸಮಾನತೆ, ಸಭ್ಯತೆಯಿಂದ ನಡೆದುಕೊಳ್ಳಬೇಕು. ಏಡ್ಸ್ ಅಥವಾ ಹೆಚ್.ಐ.ವಿ ಜೀವನದಿಂದ ಮೃತ್ಯು ಬರುತ್ತದೆ ಎಂಬ ಭಯವನ್ನು ಯಾರು ಮೂಡಿಸಬಾರದು.
ಈ ರೋಗಕ್ಕೆ ತುತ್ತಾದವರಿಗೆ ಸಮರ್ಪಕವಾಗಿ ಆರೋಗ್ಯ ತಪಾಸಣೆ ಮಾಡಿ ಸಕಾಲಕ್ಕೆ ಚಿಕಿತ್ಸೆ ನೀಡಿದರೆ ಅವರು ಸಹ ಬಹಳ ವರ್ಷಗಳ ಕಾಲ ಬದುಕಲು ಅವಕಾಶ ಮಾಡಿದಂತಾಗುತ್ತದೆ. ಹೆಚ್.ಐ.ಪೀಡಿತ ರೋಗಿಗಳಿಗೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಇವರಿಗೆ ಸರ್ಕಾರ ಆರ್ಥಿಕ ಸಹಾಯವನ್ನು ನೀಡಲು ಧನಶ್ರೀ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು ಅದರಿಂದ 50 ಸಾವಿರ ರೂವರೆಗೆ ಸಹಾಯಧನವನ್ನು ನೀಡುತ್ತಿದೆ. ಕಾನೂನು ಪ್ರಾಧಿಕಾರ ಸಹ ಏಡ್ಸ್ ರೋಗವನ್ನು ನಿಯಂತ್ರಣ ಮಾಡುವಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿ ಅವರಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು, ತಹಶೀಲ್ದಾರ್ ಬಿ.ಎಸ್.ರಾಜೀವ್, ನಗರಸಭೆ ಪೌರಾಯುಕ್ತ ಶ್ರೀಕಾಂತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಡಾ.ಮಂಜುನಾಯಕ್, ಸಿಡಿಪಿಒ ನವತಾಜ್, ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಕೆ.ರಮೇಶ್, ಡಾಲ್ಫಿನ್ ವಿದ್ಯಾಸಂಸ್ಥೆಯ ಅಶೊಕ್ ಹಾಜರಿದ್ದರು.