Sidlaghatta : ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟಮೊದಲ ಕೃತಿ “ಕವಿರಾಜಮಾರ್ಗ” ವನ್ನು ರಚಿಸಿದ “ಶ್ರೀವಿಜಯ”ನ ಹೆಸರಿನಲ್ಲಿ ಕನ್ನಡ ಸಂಘವನ್ನು ಶಾಲೆಯಲ್ಲಿ ಮಾಡುವ ಮೂಲಕ ತಾಯ್ನೆಲ ಮತ್ತು ತಾಯಿನುಡಿಗೆ ಗೌರವ ಸಲ್ಲಿಸುತ್ತಿರುವುದು ಹಾಗೂ ಸಾಹಿತ್ಯಾಸಕ್ತಿಯನ್ನು ಮಕ್ಕಳಲ್ಲಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ಡಾಲ್ಫಿನ್ ವಿದ್ಯಾ ಸಂಸ್ಥೆಯ ಸಿ.ಬಿ.ಎಸ್.ಸಿ ವಿಭಾಗದಲ್ಲಿ ಬುಧವಾರ 9ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಕನ್ನಡ ಸಾಹಿತ್ಯ ಸಂಘದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
9 ನೇ ಶತಮಾನದಲ್ಲಿ ರಾಷ್ಟಕೂಟ ಚಕ್ರವರ್ತಿ ಅಮೋಘ ವರ್ಷ ನೃಪತುಂಗನ ಆಸ್ಥಾನದಲ್ಲಿದ್ದ, ಶ್ರೀವಿಜಯನ “ಕವಿರಾಜಮಾರ್ಗ” ಕೃತಿಯಲ್ಲಿ ಕನ್ನಡ ಭಾಷಿಕರ ಕನ್ನಡ ನಾಡು ಕಾವೇರಿಯಿಂದ ಗೋದಾವರಿಯವರೆಗೆ ವ್ಯಾಪಿಸಿತ್ತು ಎಂಬ ಸಂಗತಿಯಿದೆ. ಇದರಲ್ಲಿ ಕರ್ನಾಟಕದ ನಾಡು ,ನುಡಿ, ಜನ ಮತ್ತು ಸಂಸ್ಕೃತಿಗಳ ಸಮೃದ್ದ ಮಾಹಿತಿ ದೊರೆಯುತ್ತದೆ.
ಆಡಳಿತಾಧಿಕಾರಿ ಚಂದನ ಅಶೋಕ್ ಮಾತನಾಡಿ, ವಿದ್ಯಾರ್ಥಿಗಳು ರೋಗಮುಕ್ತರಾಗಬೇಕಾದರೆ ಯೋಗ ಬಹಳ ಮುಖ್ಯ. ಯೋಗವು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಅಭ್ಯಾಸ. ಯೋಗಕ್ಕೆ ಯಾವುದೇ ಧರ್ಮ, ಜಾತಿ, ವರ್ಣದ ಬೇಧವಿಲ್ಲ. ಆಸಕ್ತಿ ಇರುವ ಯಾರೂ ಅಭ್ಯಸಿಸಬಹುದು ಎಂದು ಹೇಳಿದರು
ಕನ್ನಡ ಸಂಘದ ವಿದ್ಯಾರ್ಥಿ ಅಧ್ಯಕ್ಷರಾಗಿ ಸಹನ, ಉಪಾಧ್ಯಕ್ಷರಾಗಿ ಅಂತರ, ಕಾರ್ಯದರ್ಶಿಯಾಗಿ ಕೌಸ್ತುಭ್ ಆಯ್ಕೆಯಾದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಂದ ವಿವಿಧ ಭಂಗಿಗಳಲ್ಲಿ ಯೋಗಾಸನಗಳು ನಡೆಸಿಕೊಡಲಾಯಿತು. ಕಸಾಪ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ 14 ಕನ್ನಡ ಸಾಹಿತ್ಯಿಕ ಪುಸ್ತಕಗಳನ್ನು ನೀಡಲಾಯಿತು.
ಡಾಲ್ಫಿನ್ ವಿದ್ಯಾ ಸಂಸ್ಥೆ ಅಧ್ಯಕ್ಷ ಎ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಆಡಳಿತಾಧಿಕಾರಿ ಚಂದನ ಅಶೋಕ್, ಪ್ರಾಂಶುಪಾಲೆ ಸುಮತಿ, ಕನ್ನಡ ವಿಭಾಗದ ಮುಖ್ಯಸ್ಥ ಎನ್.ರಾಮಾಂಜಿ, ಶಿಕ್ಷಕರಾದ ಮಂಜುಳ, ದೀಪ, ಪಲ್ಲವಿ, ಸುಜಾತ ಹಾಜರಿದ್ದರು.