Sidlaghatta : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕಿನ 4 ಗ್ರಾಮ ಪಂಚಾಯಿತಿಗಳ ಡಿಜಿಟಲ್ ಗ್ರಂಥಾಲಯಗಳಿಗೆ ಶಾಸಕ ಬಿ.ಎನ್.ರವಿಕುಮಾರ್ ಗಣಕಯಂತ್ರ (ಕಂಪ್ಯೂಟರ್) ಮತ್ತು ಪ್ರಿಂಟಿಂಗ್ ಯಂತ್ರವನ್ನು ಸೋಮವಾರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಗ್ರಂಥಾಲಯಗಳು ಗುಡಿಗಳಿದ್ದಂತೆ, ಜ್ಞಾನವನ್ನು ನೀಡುವ ಪುಸ್ತಕಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಕಡಿಮೆ ಸ್ಥಳದಲ್ಲಿ ಹೆಚ್ಚು ಪುಸ್ತಕಗಳನ್ನು ಒದಗಿಸುವ ಹಾಗೂ ಉನ್ನತ ಮಟ್ಟದಲ್ಲಿ ಸೌಲಭ್ಯ ಒದಗಿಸುವ ಕೆಲಸ ನಡೆಯುತ್ತಿದೆ. ಗ್ರಂಥಾಲಯಗಳ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಯುವಕರು,ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಗ್ರಂಥಾಲಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕಿನ ಚೀಮಂಗಲ, ಮಳ್ಳೂರು, ಬಶೆಟ್ಟಹಳ್ಳಿ, ಅಬ್ಲೂಡು ಗ್ರಾಮ ಪಂಚಾಯಿತಿಗಳಿಗೆ ಅನಿರ್ಬಂಧಿತ ಅನುದಾನದಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟಿಂಗ್ ಯಂತ್ರಗಳನ್ನು ಖರೀದಿ ಮಾಡಿದ್ದು, ಪ್ರತಿ ಪಂಚಾಯಿತಿಗೆ 4 ಕಂಪ್ಯೂಟರ್ ಮತ್ತು ಒಂದು ಪ್ರಿಂಟಿಂಗ್ ಯಂತ್ರವನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ, ಇಓ ಜಿ.ಮುನಿರಾಜ, ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ತನ್ವೀರ್ ಅಹಮದ್, ವಜ್ರೇಶ್, ಕೃಷ್ಣಪ್ಪ, ಕಾರ್ಯದರ್ಶಿ ಮಂಜುನಾಥ್, ಬಶೆಟ್ಟಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಡಿ.ಬಿ ವೆಂಕಟೇಶ್, ಸಿಬ್ಬಂದಿ ಹಾಜರಿದ್ದರು.