ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕುದುಪಕುಂಟೆ ಗ್ರಾಮದ ಬಳಿ ಗೃಹೋಪಯೋಗಿ ವಸ್ತುಗಳ ಮಾರಾಟ ಮಾಡುವ ಸೋಗಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆಂಧ್ರ ಮೂಲದ ಇಬ್ಬರನ್ನು ಬಂಧಿಸಿ ಸುಮಾರು 17 ಲಕ್ಷ ಮೌಲ್ಯದ ಗಾಂಜಾವನ್ನು ದಿಬ್ಬೂರಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಆಂಧ್ರ ಮೂಲದ ಪ್ರಕಾಶ್ ಹಾಗೂ ವೆಂಕಟರವಣಪ್ಪ ಎನ್ನಲಾಗಿದೆ.
ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಿಬ್ಬೂರಹಳ್ಳಿ ಪಿಎಸ್ಸೈ ರಂಜನ್‌ಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಕುದುಪಕುಂಟೆ ಬಳಿ ಟಾಟಾ ಅಪೇ ಗೂಡ್ಸ್ ಆಟೋವೊಂದರಲ್ಲಿ ಗೃಹಬಳಕೆ ವಸ್ತುಗಳಾದ ಪ್ಲಾಸ್ಟಿಕ್ ಬಿಂದಿಗೆ, ಸಿಲ್ವರ್ ಸಾಮಾನು ಮಾರಾಟ ಮಾಡುವ ವಾಹನವನ್ನು ಶನಿವಾರ ತಡರಾತ್ರಿ ಪರಿಶೀಲಿಸಿದಾಗ ಬಿಂದಿಗೆ ಹಾಗೂ ಗೃಹೋಪಯೋಗಿ ವಸ್ತುಗಳ ಕೆಳಗೆ ಸುಮಾರು 17 ಲಕ್ಷ ಬೆಲೆ ಬಾಳುವ 33 ಕೆಜಿ ಗಾಂಜಾ ಹಾಗೂ ಮಾರಾಟ ಮಾಡಿ ಬಂದಿದ್ದಂತಹ 20 ಸಾವಿರ ನಗದು ಪತ್ತೆಯಾಗಿದೆ.
ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು 33 ಕೆಜಿ ಗಾಂಜಾ ಹಾಗು 20 ಸಾವಿರ ನಗದು ಹಣವನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಸಮ್ಮುಖದಲ್ಲಿ ಪಂಚನಾಮೆ ನಡೆಸಿ ದಿಬ್ಬೂರಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.